ಕಲಬುರಗಿ: ಸರ್ಕಾರಿ ಯೋಜನೆಯಡಿ ನೀಡಲಾಗುವ ಮನೆ ಕೇಳಲು ಬಂದ ಮಹಿಳೆಯನ್ನು ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಮಂಚಕ್ಕೆ ಕರೆದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ನಡೆದಿದೆ.
ಪಂಚಾಯಿತಿ ಮನೆ ಮಾಡಿಸಿಕೊಡುತ್ತೇನೆ, ನನ್ನ ಜತೆ ಮಲಕೋ. ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನಾದರೂ ಕಳಿಸು ಎಂದಿದ್ದಾನೆ ಎಂದು ಪೊಲೀಸರಿಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ. ಮರಗುತ್ತಿ ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್ ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪಿ.
ಈ ಸಂಬಂಧ ಮಹಿಳೆ, ನೀಲಕಂಠ ರಾಠೋಡ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಳಸಾಪುರ ಗ್ರಾಮದ ಮಹಿಳೆ ಮನೆ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ನೀಲಕಂಠಗೆ ಮನವಿ ಮಾಡಿದ್ದಾಳೆ. ಆಗ ನೀಲಕಂಠ, ಪಂಚಾಯತಿಯಿಂದ ಮನೆ ಮಾಡಿಸಿಕೊಡಲು ದುಡ್ಡಿಗೆ ಬೇಡಿಕೆ ಇಟ್ಟಿದ್ದಾನೆ. ದುಡ್ಡು ಕೊಡಲು ಆಗದಿದ್ದರೆ ನನ್ನ ಜತೆ ಮಲಕೋ ಎಂದು ಒತ್ತಾಯ ಮಾಡಿದ್ದಾನೆ. ಅಲ್ಲದೇ ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನಾದರೂ ಕಳುಹಿಸು ಎಂದಿದ್ದಾನೆ. ಹೀಗೆಂದು ಮಹಿಳೆ ಆರೋಪಿಸಿದ್ದಾಳೆ.
ನೀಲಕಂಠ ರಾಠೋಡ್ ಮಾತಿನಿಂದ ಆಕ್ರೋಶಗೊಂಡ ಮಹಿಳೆ, ಮಳಸಾಪುರ ಗ್ರಾಮದಿಂದ ಮರಗುತ್ತಿ ಪಂಚಾಯತಿಗೆ ಆಯ್ಕೆಯಾಗಿರುವ ನೀಲಕಂಠನ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಪೊಲೀಸರು ಬಿಎನ್ಎಸ್ ಕಾಯ್ದೆ 75, 78,79 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

