ಕಲಬುರಗಿ: ಶಿಕ್ಷಣ, ಆರೋಗ್ಯ, ಕೌಶಲ್ಯ, ಮಹಿಳಾ ಮತ್ತು ಮಕ್ಕಳು, ಕೃಷಿ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಹಿನ್ನಲೆ ಇತ್ತೀಚೆಗೆ ನೀತಿ ಆಯೋಗವು ಡೆಲ್ಟಾ ರ‍್ಯಾಂಕ್-2024 ಘೋಷಿಸಿದ್ದು, ದಕ್ಷಿಣ ಭಾರತ ವಲಯದಡಿ ರಾಜ್ಯದ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಒಟ್ಟಾರೆ 500 ತಾಲೂಕಿನಲ್ಲಿ ಕಾರ್ಯಕ್ಷಮತೆ ವಿಭಾಗದಡಿ ಪ್ರಥಮ, ದ್ವಿತೀಯ ಹಾಗೂ 6 ವಲಯಗಳಲ್ಲಿ ಪ್ರಥಮ, ದ್ವಿತೀಯ ರ‍್ಯಾಂಕ್ ಘೋಷಣೆ ಮಾಡಲಾಗಿದೆ. ಇದರಲ್ಲಿ ದಕ್ಷಿಣ ಭಾರತ ವಲಯದಡಿ ಆಂಧ್ರ ಪ್ರದೇಶದ ಭಾಮಿನಿ ತಾಲೂಕು ಪ್ರಥಮ ಸ್ಥಾನ ಗಳಿಸಿದರೆ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ‍್ಯಾಂಕ್ ಪಡೆಯಲು ಸಫಲವಾಗಿದೆ.