ಕಲಬುರಗಿ: ಪುಣ್ಯ ಸ್ಥಾನಕ್ಕೆ ಹೋದ ಯುವತಿಯೊಬ್ಬಳು ನೀರುಪಾಲಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಬಳಿಯ ಭೀಮಾ ನದಿಯಲ್ಲಿ ನಡೆದಿದೆ.
ಶೈಲಿ ಗೋಡೆ (23) ಮೃತ ದುರ್ದೈವಿ. ಮಹಾರಾಷ್ಟ್ರದ ದೌಂಡ್ ತಾಲೂಕಿನ ವಂಡಅಡವಿ ಗ್ರಾಮದ ಶೈಲಿ, ಕುಟುಂಬ ಸಮೇತ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕೆ ಆಗಮಿಸಿದ್ದರು.
ದರ್ಶನಕ್ಕೂ ಮುನ್ನ ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ತೆರಳಿದ್ದರು. ಭೀಮಾ ನದಿಯ ಚಕ್ರೇಶ್ವರ ತೀರ್ಥದಲ್ಲಿ ಸ್ನಾನ ಮಾಡಲು ತೆರಳಿದ್ದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಮತ್ತು ಪೊಲೀಸರು ಭೇಟಿ ನೀಡಿ ನೀರಿನೊಳಗೆ ಇದ್ದ ಶವವನ್ನು ಹೊರಗೆ ತಗೆದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದೇವಲಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

