ಕಲಬುರಗಿ : ನೀಟ್ ಪರೀಕ್ಷೆ ಬರೆದಿದ್ದ ಯುವತಿಯೊಬ್ಬಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೋರ್ಟ್ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ಭಾಗ್ಯಶ್ರೀ ರಾಜಶೇಖರ್ (18) ಮೃತ ವಿದ್ಯಾರ್ಥಿನಿಯಾಗಿದ್ದು, ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.92 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದರು. ವೈದ್ಯಕೀಯ ಶಿಕ್ಷಣದ ಕನಸು ಕಂಡಿದ್ದ ಭಾಗ್ಯಶ್ರೀ, ಇತ್ತೀಚೆಗೆ ಮೇ 2ರಂದು ನೀಟ್ ಪರೀಕ್ಷೆ ಬರೆದಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಮೃತಳ ತಂದೆ ರಾಜಶೇಖರ್ ಮಾತನಾಡಿ, ಮಗಳಿಗೆ ನೀಟ್ ಪರೀಕ್ಷೆಯ ಬಗ್ಗೆ ಬಹಳ ನಿರೀಕ್ಷೆಗಳಿದ್ದವು. ಆದರೆ ಫಲಿತಾಂಶದ ಬಗ್ಗೆ ಯಾವುದೇ ಆತಂಕ ಇತ್ತೋ ಗೊತ್ತಿಲ್ಲ. ಡೆತ್‌ನೋಟ್ ಸಿಕ್ಕಿಲ್ಲ. ಆತ್ಮಹತ್ಯೆಗೆ ಕಾರಣವೂ ತಿಳಿಸಿಲ್ಲ. ನಮ್ಮ ಜೊತೆಗೆ ತುಂಬಾ ಚೆನ್ನಾಗಿಯೇ ಇದ್ದಳು. ನಾವು ಯಾರ ಮೇಲೂ ದೂರು ನೀಡುವುದಿಲ್ಲ ಎಂದು ಕಣ್ಣೀರಿಟ್ಟರು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.