ಕಲಬುರಗಿ: ಹಸುವಿನ ಎರಡೂ ಕಿವಿ ಕತ್ತರಿಸಿ ತಿಂದ ನಿಗೂಢ ಪ್ರಾಣಿ? ರೈತರಲ್ಲಿ ಆತಂಕ ಸೃಷ್ಟಿಯಾಗಿರುವ ಘಟನೆ ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದಲ್ಲಿ ನಡೆದಿದೆ.
ಉಮೇಶ್ ಜಮದಾರ ಅವರಿಗೆ ಸೇರಿದ ಗೀರ ತಳಿ ಆಕಳಿನ ಎರಡೂ ಕಿವಿಗಳಿಗೆ ಹಾನಿಯಾಗಿದೆ. ಯಾವ ಪ್ರಾಣಿ ದಾಳಿ ನಡೆಸಿದೆ ಎಂದು ತಿಳಿದು ಬಂದಿಲ್ಲ. ರಾತ್ರಿ ಜಮೀನಿನಲ್ಲಿ ಕಟ್ಟಿದ್ದ ಆಕಳು ಕೂಗಿದ ಶಬ್ದ ಕೇಳಿ ಪಕ್ಕದ ರೈತರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ರೈತರು ಧಾವಿಸಿದ ವೇಳೆ ಆಕಳಿನ ಎರಡೂ ಕಿವಿಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿತ್ತು. 15 ದಿನಗಳ ಹಿಂದೆ ಪಕ್ಕದ ಜಮೀನಿನ ಹಸುವಿಗೂ ಇದೇ ರೀತಿಯ ಘಟನೆ ನಡೆದಿತ್ತು ಎಂದು ರೈತರು ಮಾಹಿತಿ ನೀಡಿದರು.
ನಿಗೂಢ ಘಟನೆಗಳಿಂದ ಜಂಬಗಾ (ಬಿ) ಗ್ರಾಮದ ರೈತರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಯಾವ ಪ್ರಾಣಿ ಹಾನಿ ಮಾಡಿದೆ ಎಂಬುದನ್ನು ಪತ್ತೆಹಚ್ಚಬೇಕು ಎಂದು ರೈತರು ಒತ್ತಾಯಿಸಿದರು.

