ಕೊಪ್ಪಳ: ಮಸೀದಿ ಆವರಣದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾರ್ವಜನಿಕರು ಭಾವೈಕ್ಯತೆ ಸಂದೇಶ ಸಾರಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.

ಕಳೆದ ಮೂರು ವರ್ಷಗಳಿಂದ ಇಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಜನ ಒಟ್ಟಿಗೆ ಸೇರಿ ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಾ ಬರುತ್ತಿದ್ದಾರೆ. ಮುಸ್ಲಿಂ ಬಾಂಧವರೇ 5 ದಿನಗಳ ಕಾಲ ಪೂಜಾ ಕೈಂಕರ್ಯವನ್ನು ನೆರವೇರಿಸಲಿದ್ದಾರೆ. ಗಣೇಶ ವಿಸರ್ಜನೆಗೂ ಮುನ್ನಾ ದಿನ ಅನ್ನಸಂತರ್ಪಣೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರವೇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.