ಕರ್ನಾಟಕದ ಹಲವೆಡೆ ವರುಣಾರ್ಭಟ ಹೆಚ್ಚಾಗಿದ್ದು, ಅವಾಂತರಗಳನ್ನು ಸೃಷ್ಟಿಸಿದೆ. ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ, ಜನಜೀವನ ಅಸ್ತವ್ಯಸ್ತವಾಗಿದೆ. ಮನೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಹಿನ್ನಲೆ ಮುಂಜಾಗೃತ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ 6 ತಾಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಧಾರಾಕಾರ ಮಳೆ ಹಿನ್ನೆಲೆ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, N.R.ಪುರ ತಾಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ. ಜೊತೆಗೆ ಜುಲೈ 31 ರಿಂದ ಅಗಸ್ಟ್ 1 ರ ವರೆಗೂ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾದ ಹಿನ್ನಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ತಹಶೀಲ್ದಾರ್ಗಳು ಆದೇಶಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ತಹಶೀಲ್ದಾರ್ ಜಕ್ಕನಗೌಡರ್ ರಜೆ ಘೋಷಣೆ ಮಾಡಿದ್ದಾರೆ. ಇತ್ತ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಕೂಡ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿದ್ದಾರೆ.
ರಾಜ್ಯದ ಹಲವೆಡೆ ಗುಡ್ಡಕುಸಿತ ಪ್ರಕರಣಗಳು ನಡೆಯುತ್ತಿದ್ದಂತೆ ಎಚ್ಚೆತ್ತ ಕೊಡಗು ಜಿಲ್ಲಾಡಳಿತ ಜಿಲ್ಲೆಯಲ್ಲಿ ಮುಂದಿನ 2 ದಿನ ರೆಡ್ ಅಲರ್ಟ್ ಘೋಷಿಸಿ, ಗುಡ್ಡ-ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಈ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಡಿಸಿ ವೆಂಕಟರಾಜಾ ಆದೇಶಿಸಿದ್ದಾರೆ.

