ಹಾಸನ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿದು ಓರ್ವ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹನಿಕೆ ಗ್ರಾಮದ ಬಳಿ ನಡೆದಿದೆ.

ಹೊಳೆನರಸೀಪುರದ ದರ್ಶನ್‌ಕುಮಾರ್ (29) ಮೃತ ದುರ್ದೈವಿ. ವಸಂತ್‌ಕುಮಾರ್ ಹಾಗೂ ಲೋಕಪ್ಪ ಗಾಯಾಳುಗಳು. ಹಾಸನದ ಪ್ರಕಾಶ್ ಎಂಬುವವರು ಕೆರೆ ಕೋಡಿ ದುರಸ್ತಿ ಗುತ್ತಿಗೆ ಪಡೆದಿದ್ದು, ದರ್ಶನ್‌ಕುಮಾರ್, ವಸಂತ್‌ಕುಮಾರ್ ಹಾಗೂ ಲೋಕಪ್ಪ ಹನಿಕೆ ಗ್ರಾಮದ ಕೆರೆ ಕೋಡಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರ್ ಮಣ್ಣು ಕುಸಿದಿದೆ.

ದರ್ಶನ್‌ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲೋಕಪ್ಪ ಹಾಗೂ ವಸಂತ್‌ಕುಮಾರ್ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಬೇಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.