ಹಾಸನ: ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಪರೀಕ್ಷೆಯಲ್ಲಿ 79% ಅಂಕ ಗಳಿಸಿದರೂ ವಿದ್ಯಾರ್ಥಿಯೊಬ್ಬ ಕಡಿಮೆ ಅಂಕ ಬಂತು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.

ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಮನೋಜ್​ ಅರಸೀಕೆರೆ ನಗರದ ಅನಂತ ಪಿಯು ಕಾಲೇಜಿನಲ್ಲಿ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ​. ಪರೀಕ್ಷೆಯಲ್ಲಿ ಮನೋಜ್‌ 79% ಅಂಕ ಗಳಿಸಿದ್ದಾನೆ. ಆದರೂ ಅಂಕ ಕಡಿಮೆ ಬಂತೆಂದು ನೊಂದ ಆತ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೋಜ್‌ ಕಾಲೇಜಿನ ಅತ್ಯಂತ ಪ್ರತಭಾನ್ವಿತ ವಿದ್ಯಾರ್ಥಿಯಾಗಿದ್ದ. ಸದಾ ಓದುವುದರಲ್ಲಿ ಟಾಪರ್‌ ಕೂಡಾ ಆಗಿದ್ದ. ಎಸ್‌ಎಸ್‌ಎಲ್‌ಸಿಯಲ್ಲಿ 98% ಅಂಕ ಗಳಿಸುವ ಮೂಲಕ ಇಡೀ ತಾಲೂಕಿನಲ್ಲಿ ಗಮನಸೆಳೆದಿದ್ದ. ಆದರೆ ಇದೀಗ ಆತನ ಆತ್ಮಹತ್ಯೆ ಸ್ಥಳೀಯರನ್ನು ಆಘಾತಕ್ಕೆ ತಳ್ಳಿದೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.