ಹಾಸನ: ಮಳೆಯ ರಣಾರ್ಭಟದಿಂದ ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿದು 5 ಜನರು ಸಾವನ್ನಪ್ಪಿದ್ದಾರೆ. 12ರಿಂದ 15 ಜನರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆಂಬ ಶಂಕೆಯಿದೆ. ಸದ್ಯ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆಯ ಬೆನ್ನಲ್ಲೇ ಶಿರಾಡಿ ಘಾಟ್ ರಸ್ತೆಯಲ್ಲಿ ಇಂತಹದೇ ದುರ್ಘಟನೆ ನಡೆದಿದೆ. ಏಕಾಏಕಿ ಮಣ್ಣು ಗುಡ್ಡ ಕುಸಿದಿದೆ. ಪರಿಣಾಮ ಮಾರುತಿ ಸುಜುಕಿ ಕಂಪನಿಯ ಓಮಿನಿ ಕಾರು ಮಣ್ಣಿನಲ್ಲಿ ಸಿಲುಕಿಕೊಂಡಿದೆ.

ಸಕಲೇಶಪುರ ತಾಲ್ಲೂಕಿನ, ಎತ್ತಿನಹಳ್ಳ ಬಳಿ ಮಳೆಯ ಅಬ್ಬರದಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.