ಹಾಸನ: ಜಿಲ್ಲೆಯ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬಳು ಪತಿಯನ್ನು ತ್ಯಜಿಸಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದ್ದು, ಕಾರಿನೊಳಗೆ ತಾಳಿ ಕಟ್ಟಿಸಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಸುಮಾರು ಎಂಟು ವರ್ಷಗಳ ಹಿಂದೆ ತನ್ನ ಸಂಬಂಧಿಯನ್ನೇ ಮದುವೆಯಾಗಿದ್ದ ಮಹಿಳೆ, ಇತ್ತೀಚೆಗೆ ಮತ್ತೊಬ್ಬ ಯುವಕನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡಿದ್ದಾಳೆ ಎನ್ನಲಾಗಿದೆ. ನಂತರ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ತೆರಳಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಈ ವಿಚಾರ ತಿಳಿದು ಕುಟುಂಬದವರ ನಡುವೆ ತೀವ್ರ ಗೊಂದಲ ಉಂಟಾಗಿ, ಪ್ರಕರಣ ಗೊರೂರು ಪೊಲೀಸ್ ಠಾಣೆಗೆ ತಲುಪಿತ್ತು. ಪೊಲೀಸರು ಮಧ್ಯಪ್ರವೇಶಿಸಿ ರಾಜಿ ಪಂಚಾಯ್ತಿ ನಡೆಸಿ, ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.

ಆದರೆ, ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆ ಮತ್ತೆ ಗಂಡನ ಮನೆಗೆ ಹೋಗುವುದಾಗಿ ತಿಳಿಸಿ ಕುಟುಂಬದವರ ವಿಶ್ವಾಸ ಗಳಿಸಿದ್ದಾಳೆ. ಇದನ್ನು ನಂಬಿದ ಪತಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಅದೇ ದಿನ ರಾತ್ರಿ ಮಹಿಳೆ ತನ್ನ ಪ್ರಿಯಕರನನ್ನು ಸಂಪರ್ಕಿಸಿ ಮತ್ತೊಮ್ಮೆ ಮನೆಯಿಂದ ಪರಾರಿಯಾಗಿರುವುದು ತಿಳಿದುಬಂದಿದೆ. ಇದರಿಂದ ಪತಿ ಮತ್ತೊಮ್ಮೆ ಮೋಸ ಹೋಗಿರುವುದು ಬಹಿರಂಗವಾಗಿದೆ.

ಇನ್ನೊಂದೆಡೆ, ಹರ್ಷಿತಾ ಎಂಬ ಮಹಿಳೆ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಗಂಡನಿಂದ ಗೃಹ ಹಿಂಸೆ ಅನುಭವಿಸಿದ್ದಾಗಿ ಆರೋಪಿಸಿದ್ದಾರೆ. “ಗಂಡನು ಮದ್ಯಪಾನ ಮಾಡಿ ಪ್ರತಿದಿನವೂ ಹೊಡೆದು ಹಿಂಸೆ ನೀಡುತ್ತಿದ್ದ. ಆ ಕಾರಣದಿಂದ ಮನೆ ಬಿಟ್ಟು ಬಂದಿದ್ದೇನೆ. ಗಂಡನ ಜೊತೆ ಹಿಂದಿರುಗುವುದಿಲ್ಲ, ಪ್ರಿಯಕರ ಸಚಿನ್ ಜೊತೆ ಬದುಕು ನಡೆಸುತ್ತೇನೆ” ಎಂದು ತಿಳಿಸಿದ್ದಾರೆ. ತಮ್ಮ ಮಗುವನ್ನು ಸಾಕಲು ಸಿದ್ಧಳಿದ್ದೇನೆ ಎಂದೂ ಹೇಳಿದ್ದಾರೆ.

ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣವು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ದಾಂಪತ್ಯ ಜೀವನದಲ್ಲಿ ಗೃಹ ಹಿಂಸೆ ಹಾಗೂ ವೈಯಕ್ತಿಕ ಆಯ್ಕೆಗಳ ಕುರಿತಂತೆ ಮತ್ತೆ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.

View this post on Instagram

A post shared by News Karnataka (@newskarnataka)