ಹಾಸನ: ಕೇರಳದ ವಯನಾಡಿನಲ್ಲಿ ಬೃಹತ್ ಭೂಕುಸಿತ ಸಂಭವಿಸಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆಯ ಬೆನ್ನಿನಲ್ಲಿಯೇ, ಹಾಸನದ ಶಿರಾಡಿ ಘಾಟಿಯಲ್ಲಿಯೂ ರಸ್ತೆಯ ಮೇಲೆ ಭಾರೀ ಭೂಕುಸಿತ ಸಂಭವಿಸಿದೆ. ಮಣ್ಣಿನಡಿ ಹಲವು ವಾಹನಗಳು ಸಿಲುಕಿಕೊಂಡಿದ್ದು, ಇನ್ನಷ್ಟು ಕುಸಿತದ ಆತಂಕ ಎದುರಾಗಿದೆ. ಘಾಟಿಯಲ್ಲಿ ವಾಹನ ಸಂಚಾರ ಪೂರ್ತಿ ರದ್ದುಗೊಳಿಸಲಾಗಿದೆ.
ಬೆಂಗಳೂರು- ಮಂಗಳೂರು ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಮತ್ತೆ ಬೃಹತ್ ಭೂಕುಸಿತವಾಗಿದೆ. ಕನಿಷ್ಠ ಎರಡು ಕಾರುಗಳು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಇದರಡಿ ಸಿಲುಕಿಕೊಂಡಿವೆ. ತಕ್ಷಣ ಸ್ಥಳದಲ್ಲಿದ್ದವರು ವಾಹನಗಳಲ್ಲಿ ಇದ್ದವರನ್ನು ಹೊರಗೆ ಎಳೆತಂದಿದ್ದಾರೆ.

