ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಲ್ಲಘಟ್ಟ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಧರ್ಮಸ್ಥಳದಿಂದ ಮರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಪರಿಣಾಮ, ತಾಯಿ ಮತ್ತು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಲ್ಲಘಟ್ಟದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ನಾಲೆಯ ನೀರಿಗೆ ಬಿದ್ದಿದೆ. ಮೃತರನ್ನು ಪ್ರಿಯಾಂಕಾ (30) ಮತ್ತು ಅವರ ಒಂದೂವರೆ ವರ್ಷದ ಹೆಣ್ಣು ಮಗು ಎಂದು ಗುರುತಿಸಲಾಗಿದೆ.

ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಕಾರಿನಲ್ಲಿದ್ದ ಇತರ ಸದಸ್ಯರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಕೂಡಲೇ ಚನ್ನರಾಯಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲೆಗೆ ನೀರಿನ ಹರಿವು ಹೆಚ್ಚಾಗಿದ್ದರಿಂದ ತಾಯಿ ಮತ್ತು ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.