ಸಕಲೇಶಪುರ : ಪರಿಸರ ಸಂರಕ್ಷಣೆ ಬಗ್ಗೆ ಎಷ್ಟೇ ಭಾಷಣ ಮಾಡಿದರೂ, ನಿಜ ಜೀವನದಲ್ಲಿ ಜವಾಬ್ದಾರಿ ತಪ್ಪಿಸುತ್ತಿರುವುದು ಸರ್ಕಾರವೇ – ಇಂದು ಪಟ್ಟಣದಲ್ಲಿ KSRTC ಬಸ್‌ನಿಂದ ಉಗುಳಿದ ಅತಿಯಾದ ಹೊಗೆ ನೋಡಿದ ನಂತರ ಸಾರ್ವಜನಿಕರ ಪ್ರತಿಕ್ರಿಯೆ ಇದು.

ಉದೇವಾರ ಕಡೆಗೆ ಹೊರಟಿದ್ದ ಸಕಲೇಶಪುರ ಡಿಪೋಗೆ ಸೇರಿದ ಈ ಬಸ್ ರಸ್ತೆ ತುಂಬೆಲ್ಲಾ ಕಪ್ಪು ಹೊಗೆ ಹರಡುತ್ತ ಸಾಗಿದ್ದು, ಪ್ರಯಾಣಿಕರು ಹಾಗೂ ಪಾದಚಾರಿಗಳು ನಲುಗಿ ಹೋಗುವಂತಾಗಿತ್ತು.

“ಮಾಲಿನ್ಯ ನಿಯಂತ್ರಣ ನಿಯಮಗಳು ಕೇವಲ ಖಾಸಗಿ ವಾಹನಗಳಿಗೆ ಮಾತ್ರವೇ? ಸರ್ಕಾರಿ ಬಸ್ಸುಗಳಿಗೆ ಏಕೆ ಅನುಸರಿಸಲಾಗುವುದಿಲ್ಲ?” ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಇಲಾಖೆ ಬಸ್ಸುಗಳ ತಾಂತ್ರಿಕ ದೋಷ, ಎಮಿಷನ್ ಟೆಸ್ಟ್‌ಗಳ ನಿರ್ಲಕ್ಷ್ಯ – ಇವುಗಳು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವೆಂಬ ಎಚ್ಚರಿಕೆ ಪರಿಸರ ಹೋರಾಟಗಾರರಿಂದ ವ್ಯಕ್ತವಾಗಿದೆ.

ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸಾರಿಗೆ ಸಚಿವರು ತಕ್ಷಣ ಕ್ರಮ ಕೈಗೊಂಡು ಹೊಗೆ ಬಂಡಿ ಬಸ್ಸುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಜನಮನದ ಒತ್ತಾಯವಾಗಿದೆ.