ಮಂಗಳೂರು: ಬೆಂಗಳೂರು ಮಂಗಳೂರು ರೈಲು ಸಂಚಾರ ರದ್ದಾಗಿದ್ದರಿಂದ ಖಾಸಗಿ ಬಸ್​​ ಟಿಕೆಟ್​ ದರ ಹೆಚ್ಚಳವಾಗಿದೆ. ಇದರ ಬೆನ್ನಲ್ಲೆ ಇದೀಗ ವಿಮಾನ ಟಿಕೆಟ್​ ಸಹ ಗಗನಕ್ಕೇರಿದೆ.
ಹಳಿ ಮೇಲೆ ಮಣ್ಣ ಕುಸಿತವಾಗಿದ್ದರಿಂದ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು, ಮಂಗಳೂರು ಬೆಂಗಳೂರು ನಡುವಿನ ವಿಮಾನಯಾನ ದರ ಮೂರ್ನಾಲ್ಕು ಪಟ್ಟು ಹೆಚ್ಚಿಸಿವೆ. ಇದರಿಂದ ವಿಮಾನ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಸಾಮಾನ್ಯವಾಗಿ ಮಂಗಳೂರು ಟು ಬೆಂಗಳೂರು ವಿಮಾನ ಟಿಕೆಟ್​ ದರ 3 ಸಾವಿರದಿಂದ 3,600 ಇರುತ್ತಿತ್ತು. ಆದ್ರೆ, ಇಂದು (ಜುಲೈ 29) ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಿಮಾನ ದರ 9,143 ರೂಪಾಯಿಗೆ ಹೆಚ್ಚಳವಾಗಿದೆ. ವೀಕ್​ ಡೇಸ್​​ಗಳಲ್ಲೇ ಇಷ್ಟಾದರೆ ಇನ್ನು ವಾರಾಂತ್ಯದಲ್ಲಿ ಇನ್ನಷ್ಟು ಟಿಕೇಟ್ ದರ ಹೆಚ್ಚಿಸುವ ಸಾಧ್ಯತೆಗಳಿವೆ. ಈ ದರ ಏರಿಕೆ ನಿರ್ಧಾರಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.