ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆಯೋ ಅದು ಅವರ ಆಂತರಿಕ ವಿಚಾರ, ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನುವುದು ಮುಖ್ಯ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಸಿದ್ದರಾಮಯ್ಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೇ ಅನ್ನುವುದು ಅವರಿಗೆ ಬಿಟ್ಟದ್ದು. ಒಳ್ಳೆಯ ಆಡಳಿತ ನೀಡಲಿ ಅಂತ ಜನತೆ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದೆ. ಸರ್ಕಾರದಲ್ಲಿ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರಗಾಲ ಬಂದರೂ ಸರಿಯಾದ ಪರಿಹಾರ ಕೊಡುತ್ತಿಲ್ಲ. ಮುಳುಗಡೆಯಾದ ಪ್ರದೇಶಗಳಿಗೆ ಪರಿಹಾರ ಕೊಟ್ಟಿಲ್ಲ. ಒಂದು ವಿಡಿಯೋ ಕಾಲ್ ಬಿಟ್ಟರೆ ಬೇರೇನೂ ಮಾಡಿಲ್ಲ. ಸಂಕಷ್ಟದಲ್ಲಿರೋ ಜನತೆಗೆ ಸ್ಪಂದನೆ ಮಾಡದ ಸರ್ಕಾರ ರಾಜ್ಯದಲ್ಲಿದೆ. ಇಂತಹ ಸರ್ಕಾರ ಬೇಕೆ ಅನ್ನುವ ಪ್ರಶ್ನೆ ಉದ್ಭವವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬೆಂಬಲ ಇರುವ ಕುರಿತು ಕೇಳಿದ ಪ್ರಶ್ನೆಗೆ ಹೈಕಮಾಂಡ್ ಶ್ರೀರಕ್ಷೆ ಎಲ್ಲಿವರೆಗೆ ಅನ್ನುವುದು ಅವರಿಗೇ ಬಿಟ್ಟ ವಿಚಾರ. ಒಂದು ವರದಿಯಲ್ಲಿ ಸಿಎಂಗೆ ರಕ್ಷೆ ಎನ್ನಲಾಗುತ್ತಿದೆ. ಮತ್ತೊಂದು ವರದಿಯಲ್ಲಿ ಪ್ರಾದೇಶಿಕ ಪಕ್ಷದ ರೀತಿಯಲ್ಲಿ ನಡೆದುಕೊಳ್ಳಲಾಗಲ್ಲ ಎನ್ನಲಾಗುತ್ತಿದೆ ಎಂದಿರುವುದಾಗಿ ಹೇಳಿದರು.