ಕುಂದಗೋಳ: ರಸ್ತೆ ದುರಸ್ತಿ ಪಡಿಸಿ ಚಾಕಲಬ್ಬಿ ಗ್ರಾಮಕ್ಕೆ ಸಾರಿಗೆ ಬಸ್ ಸೇವೆ ಆರಂಭಿಸಲು ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು ಇತ್ತಿಚಿಗೆ ಲೋಕೋಪಯೋಗಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಮಾಧ್ಯಮಗಳಲ್ಲಿ ವರದಿ ಆಗಿರುವುದನ್ನು ಗಮನಿಸಿದ ಸಾರಿಗೆ ಅಧಿಕಾರಿಗಳು ಇಂದು ರಸ್ತೆ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಂಶಿ ಕೊಂಕಣಕುರಹಟ್ಟಿ ರಸ್ತೆಯನ್ನು ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಕ ರಾಮನಗೌಡ ಹಾಗೂ ಸಹಾಯಕ ಸಂಚಾರಿ ಅಧೀಕ್ಷಕರು ಮತ್ತು ಸಿಬ್ಬಂದಿ ವರ್ಗ ಇಂದು ರಸ್ತೆಯನ್ನು ಪರಿಶೀಲನೆ ಮಾಡಿದರು.
ರಸ್ತೆ ಅವ್ಯವಸ್ಥೆ ಪರಿಶೀಲಿಸಿದ ಅವರು ಆದಷ್ಟು ಶೀಘ್ರ ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಿ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭಿಸಲು ತಾತ್ಕಾಲಿಕವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಿಠಲ್ ಘಾಟಿಗೆ, ಮುತ್ತಪ್ಪ ಕಟಗಿ, ದೇವಪ್ಪ ಕಾಳಿ, ಇಬ್ರಾಹಿಂ ನದಾಫ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

