ಧಾರವಾಡ: ರಾಜ್ಯ ಸರ್ಕಾರದ ಧಾರವಾಡ ರಂಗಾಯಣಕ್ಕೆ ನಿರ್ದೇಶಕರನ್ನಾಗಿ “ಕಲಿಯುಗದ ಕುಡುಕ ” ಖ್ಯಾತಿಯ ರಾಜು ತಾಳಿಕೋಟೆಯವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಯವರು ರಾಜ್ಯದ 6 ರಂಗಾಯಣಗಳಿಗೆ ನಿರ್ದೇಶಕರುಗಳನ್ನು ನೇಮಕ ಮಾಡಿದ್ದಾರೆ.
ಮೈಸೂರು ರಂಗಾಯಣದ ನಿರ್ದೇಶಕರಾಗಿ ಸತೀಶ್ ತಿಪಟೂರು, ಧಾರವಾಡ ರಂಗಾಯಣ – ರಾಜು ತಾಳಿಕೋಟೆ, ಶಿವಮೊಗ್ಗ ರಂಗಾಯಣ – ಪ್ರಸನ್ನ ಡಿ. ಸಾಗರ, ಕಲಬುರ್ಗಿ ರಂಗಾಯಣ – ಡಾ. ಸುಜಾತ ಜಂಗಮ ಶೆಟ್ಟಿ, ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ – ಮಲ್ಲಿಕಾರ್ಜುನ ಕಡಕೋಳ ಅವರನ್ನು ನೇಮಕ ಮಾಡಲಾಗಿದೆ. ಯಕ್ಷರಂಗಾಯಣ, ಕಾರ್ಕಳದ ನಿರ್ದೇಶಕರಾಗಿ ವೆಂಕಟರಮಣ ಐತಾಳ ಅವರನ್ನು ನೇಮಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಈ ಸಂಬಂಧ ಅಧಿಕೃತ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ. ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ರಂಗಾಯಣಗಳ ಕಾರ್ಯ ಚಟುವಟಿಕೆಗಳನ್ನು ವೇಗಗತಿಯಲ್ಲಿ ಕೈಗೊಳ್ಳಲು ಹಾಗೂ ರಂಗಭೂಮಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

