ಧಾರವಾಡ: ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಫೋಟೋಗಳನ್ನು ಅಶ್ಲೀಲ ಆಡಿಯೋಗೆ ಹಾಕಿ ಟ್ರೋಲ್ ಮಾಡಿ ಬಳಿಕ ಆ ಫೋಸ್ಟ್ ರಿಮೂವ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟು ಹಣ ಸುಲಿಯುವ ದಂಧೆಯೊಂದು ಪತ್ತೆಯಾಗಿದೆ.
ಧಾರವಾಡದಲ್ಲಿ ನಡೆದಿದ್ದ ಈ ದಂಧೆ ಸಂಬಂಧ ಮೂವರು ಯುವಕರ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಓರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. ನಗರದ ಪ್ರತಿಷ್ಠಿತ ಕಾಲೇಜಿನ ಯುವಕ ಯುವತಿಯರ ಇನ್ಸ್ಟ್ರಾಗಾಮ್ ಐಡಿಯಲ್ಲಿನ ಫೋಟೋಗಳನ್ನು ಬಳಸಿಕೊಂಡು ಎಡಿಟ್ ಮಾಡಿ, ಅಶ್ಲೀಲ ವಾಯ್ಸ್ ಕೊಟ್ಟು ಟ್ರೋಲ್ ಮಾಡುತಿದ್ದ ಯುವಕರ ಗುಂಪೊಂದು ಸಿಕ್ಕಿ ಬಿದ್ದಿದೆ.
ಆರೋಪಿಗಳು @TROLL_KING_AK ಸೇರಿದಂತೆ ವಿವಿಧ ಹೆಸರಿನಲ್ಲಿ ಐಡಿ ಮಾಡಿಕೊಂಡು ಯುವಕ-ಯುವತಿಯ ಫೋಟೋಗಳನ್ನು ಬಳಸಿ ಟ್ರೋಲ್ ಮಾಡಿ ಬಳಿಕ ಅವರಿಗೆ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು. ಇದೇ ರೀತಿ ಆರೋಪಿಗಳು 6 ಜನ ಯುವಕ-ಯುವತಿಯರ ಪೋಸ್ಟ್ ರಿಮೂವ್ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಪೋಸ್ಟ್ ರಿಮೂವ್ ಮಾಡಲು ರೂ. 15 ರಿಂದ 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಹಣ ನೀಡದಿದ್ದರೆ ಬೆತ್ತಲೆ ಫೋಟೋಗಳನ್ನಾಗಿ ಎಡಿಟ್ ಮಾಡುವುದಾಗಿ ಈ ಖದೀಮರು ಬೆದರಿಕೆ ಹಾಕಿದ್ದರಂತೆ. ಸದ್ಯ ಈ ಘಟನೆ ಸಂಬಂಧ ಮೂವರು ಯುವಕ ಹಾಗೂ ಓರ್ವ ಪೋಷಕನ ಮೇಲೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರನ್ನಾಧರಿಸಿ ಇಬ್ಬರನ್ನ ಪೊಲೀಸರು ಬಂಧಿಸಿದ್ದು ಓರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. ಪರಾರಿಯಾಗಿರೋ ಯುವಕನ ತಂದೆಯ ಮೇಲೂ ಕೇಸ್ ದಾಖಲಾಗಿರುವುದರಿಂದ ಅವರನ್ನೂ ವಶಕ್ಕೆ ಪಡೆಯಲಾಗಿದೆ. ಸಚಿನ ಖಡಕಭಾವಿ, ಅಕ್ಷಯ ಕಾಂಬಳೆ, ಆಕಾಶ ಮೇಟಿ ಟ್ರೋಲ್ ಮಾಡುತ್ತಿದ್ದ ಯುವಕರು. ಅಕ್ಷಯ್ ಮತ್ತು ಆಕಾಶನನ್ನು ಪೊಲೀಸರು ಬಂಧಿಸಿದ್ದು ಸಚಿನ್ ಖಡಕಭಾವಿ ಪರಾರಿಯಾಗಿದ್ದಾನೆ. ಸಚಿನ ತಂದೆ ಅಡಿವೆಪ್ಪನನ್ನು ವಶಕ್ಕೆ ಪಡೆಯಲಾಗಿದೆ. ದೂರು ದಾಖಲಿಸದಂತೆ ಯುವತಿಯರಿಗೆ ಜೀವ ಬೆದರಿಕೆ ಹಾಕಿರುವ ಆರೋಪದಡಿ ಸಚಿನ್ ತಂದೆ ಅಡಿವೆಪ್ಪನನ್ನು ವಶಕ್ಕೆ ಪಡೆಯಲಾಗಿದೆ.

