ಹುಬ್ಬಳ್ಳಿ : ಅಪ್ರಾಪ್ತೆಯನ್ನು ಪ್ರೀತಿ ಮಾಡು ಅಂತಾ ಬಲವಂತ ಮಾಡಿದ್ದಲ್ಲದೇ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅವರ ಪೋಷಕರ ಮುಂದೆಯೇ ನಿನ್ನ ಮಗಳನ್ನು ಮದುವೆ ಮಾಡಿ ಕೊಡದೇ ಹೋದ್ರೆ ಅವಳನ್ನು ಕೂಡಾ ನೇಹಾ ಹಿರೇಮಠ ರೀತಿಯಲ್ಲಿಯೇ ಕೊಲೆ ಮಾಡ್ತೀನಿ ಅಂತಾ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಓರ್ವ ಆರೋಪಿಯನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಕಾರನಗರ ನೇತಾಜಿ ಕಾಲೊನಿಯ ಅಬ್ಬಾಸ್ ಸಿಕಂದರ್ ಎಂಬಾತ 16 ವರ್ಷದ ಬಾಲಕಿಯ ಸ್ನೇಹವನ್ನು ಸಂಪಾದಿಸಿ ನಗರದ ವಿವಿಧ ಪ್ರದೇಶಗಳಲ್ಲಿ ಕರೆದುಕೊಂಡು ಓಡಾಡಿ, ಗೋಕುಲ್ ರಸ್ತೆಯಲ್ಲಿ ಆಟೋದಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಕೂಡಾ ಪ್ರಯತ್ನಿಸಿದ್ದಾನೆ. ಆಗ ಬಾಲಕಿ ಮನೆಯಲ್ಲಿ ವಿಷಯ ತಿಳಿಸಿದಾಗ ಆಕೆಯ ಪೋಷಕರು ಅಬ್ಬಾಸ್ ಗೆ ಬುದ್ದಿ ಹೇಳಿದರೂ ಅಬ್ಬಾಸ್ ಕೇಳಿಲ್ಲ.
ಬಾಲಕಿಯ ಮನೆಯ ಮುಂದೆ ಬಂದು ಬಾಲಕಿಯ ತಂದೆಗೆ ನಾನು ಅವಳನ್ನು ಪ್ರೀತಿಸುತ್ತಿದ್ದೇನೆ. ನಿನ್ನ ಮಗಳನ್ನು ಮದುವೆಯಾಗುತ್ತೇನೆ. ಅದಕ್ಕೆ ನೀನೇನಾದ್ರೂ ನಿರಾಕರಿಸಿದರೆ ಅವಳನ್ನು ನೇಹಾ ಹಿರೇಮಠ ಕೊಲೆಯಾದ ರೀತಿಯಲ್ಲಿಯೇ ಕೊಲೆ ಮಾಡುತ್ತೇನೆ ಅಂತಾ ಬಾಲಕಿಯ ತಂದೆಯ ಜೊತೆ ಜಗಳ ತೆಗೆದು ಜೀವ ಬೆದರಿಕೆ ಹಾಕಿದ್ದಾನೆ.
ಇದರಿಂದ ಮನನೊಂದ ಬಾಲಕಿಯ ತಂದೆ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಅಬ್ಬಾಸ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಕಸಬಾಪೇಟ ಠಾಣೆಯ ಪೊಲೀಸರು ಆರೋಪಿ ಅಬ್ಬಾಸ್ ವಿರುದ್ಧ ಸೆಕ್ಷನ್ 363,376,511, IPC 74,329(4).351 (3) ಪ್ರಕರಣವನ್ನು ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

