ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಸೈಮಾ ಸಮಾರಂಭದ 2024ನೇ ವರ್ಷದ ಆವೃತ್ತಿ ಶೀಘ್ರವೇ ನಡೆಯಲಿದೆ. 2024ರ ಸೈಮಾ ಪ್ರಶಸ್ತಿ ಸಮಾರಂಭ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ. ಇದರ ಭಾಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ನಟ ಡಾಲಿ ಧನಂಜಯ್, ಬೃಂದಾ ಪ್ರಸಾದ್ ಸೇರಿದಂತೆ ಕೆಲವು ನಟಿಯರು, ಸೈಮಾನ ಆಯೋಜಕರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಡಾಲಿ ಧನಂಜಯ್, ‘ಸೈಮಾ ಎಂದರೆ ನಮಗೆ ಖುಷಿ. ಈ ಬಾರಿ ದುಬೈನಲ್ಲಿ ಮತ್ತೆ ಸೈಮಾ ಆಗುತ್ತಿದೆ. ಸೈಮಾ ನನಗೆ ಅದ್ಭುತ ಮೆಮೋರಿ ಕ್ರಿಯೇಟ್ ಮಾಡುವ ಜಾಗ. ಕಳೆದ ವರ್ಷ ನನ್ನ ಹುಟ್ಟುಹಬ್ಬಕ್ಕೆ ಇಂಡಸ್ಟ್ರೀಗೆಲ್ಲಾ ನಾನು ಪಾರ್ಟಿ ಕೊಟ್ಟಿದೆ. ಈ ಬಾರಿ ನನಗೆ ಸೈಮಾದಿಂದ ಪಾರ್ಟಿ ಕೊಡುತ್ತಿದ್ದಾರೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು, ನಿರ್ದೇಶಕರನ್ನು ನೋಡುವ ಒಳ್ಳೆ ವೇದಿಕೆ. ಈ ರೀತಿಯ ಇವೆಂಟ್ ಚೆನ್ನಾಗಿರುತ್ತವೆ, ಸೈಮಾ ಎಂದಾಗ ನಮ್ಮ ಪ್ರೆಸೆಂಟ್ ಇರುತ್ತದೆ. ಲಿರಿಕ್ಸ್ ಕೆಟಗರಿಯಲ್ಲಿ ನಾನು ನಾಮಿನೇಟ್ ಮಾಡಲಾಗಿದೆ. ಸೈಮಾ ಅನ್ನುವುದು ಸೆಲೆಬ್ರೆಷನ್ ಎಂದರು.
ಈಗಾಗಲೇ ಸೈಮಾ ಪ್ರಶಸ್ತಿಗೆ ನಾಮಿನೇಷನ್ಸ್ ಆರಂಭವಾಗಿದೆ. ‘ಕಾಟೇರ’ ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನನ್ನಾ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ. ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಮಲಯಾಳಂನಲ್ಲಿ, ಟೊವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ. ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

