ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲೂ ಮಳೆಯ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ದೋಬಿ ಹಳ್ಳ ಪ್ರವಾಹಕ್ಕೆ ತಗ್ಗು ಪ್ರದೇಶದ ಮನೆಗಳು ಮುಳುಗಡೆಯಾಗಿವೆ.ಮನೆಯಿಂದ ಹೊರಬರಲು ಆಗದೆ ಸಣ್ಣ ಬೋಟ್ ಬಳಸಿ ನೆರೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಶಾಲೆ, ಮದರಸ, ಸಂತೆ ಮಾರುಕಟ್ಟೆ, ಮನೆಗಳು ಜಲಾವೃತಗೊಂಡಿದೆ. ಸದ್ಯ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಬೋಟ್ ಬಳಕೆ ಮಾಡುವಂತಾಗಿದೆ.
ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದ ಕೆರೆಯು ಕೋಡಿ ಹೊಡೆದಿದೆ. ಪರಿಣಾಮ ಭತ್ತ ನಾಟಿ ಮಾಡಿದ್ದ ಜಮೀನು ಜಲಾವೃತಗೊಂಡಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಭೂ ಕುಸಿದಿದೆ. ಮಲ್ಲೇಶ್ವರ ಗುಡ್ಡದಲ್ಲಿ ಭಾರಿ ಪ್ರಮಾಣದ ಧರೆ ಕುಸಿದು, ರಸ್ತೆಯ ಅರ್ಧ ಭಾಗಕ್ಕೆ ಗುಡ್ಡದ ಮಣ್ಣು ಬಂದಿದೆ.

