ಚಿಕ್ಕಮಗಳೂರು : ಬೆಂಗಳೂರಿನಿಂದ ಕುದುರೆಮುಖಕ್ಕೆ ಪ್ರವಾಸಿಗರನ್ನು ಕರೆತರುತ್ತಿದ್ದ ಬಸ್ ಪಲ್ಟಿಯಾದ ಘಟನೆ ಚಿಕ್ಕಮಗಳೂರಿನ ಕಳಸದ ಬಳಿ ನಡೆದಿದೆ.
ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಕಳಸ ಸಮೀಪದ ಕಚಗಾನೆ ತಿರುವಿನಲ್ಲಿ ಮುಂಜಾನೆ 5.30 ಗಂಟೆಗೆ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ತಕ್ಷಣ ಕಳಸ ಪಟ್ಟಣದ ಖಾಸಗಿ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದುದರಿಂದ ಕೆಲವರಿಗೆ ಕೈಕಾಲುಗಳಿಗೆ ಹಾಗೂ ತಲೆಗೆ ಗಾಯಗಳಾಗಿವೆ ಎಂಬ ಮಾಹಿತಿ ತಿಳಿದು ಬಂದಿದೆ.

