ಚಿಕ್ಕಮಗಳೂರು: ಯುವಕರ ಗುಂಪೊಂದು ನಡುರಸ್ತೆಯಲ್ಲೇ ತಲ್ವಾರ್ ಹಿಡಿದು ಪುಂಡಾಟ ಮೆರೆದ ಆಘಾತಕಾರಿ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಧ್ಯರಾತ್ರಿ ವೇಳೆ ಸಾರ್ವಜನಿಕ ರಸ್ತೆಯಲ್ಲೇ ಲಾಂಗ್ನಿಂದ ಬೃಹತ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಯುವಕನ ವಿರುದ್ಧ ಈಗ ಪೊಲೀಸರು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ನಗರದ ವಾಜಪೇಯಿ ಲೇಔಟ್ನಲ್ಲಿ ಈ ಕಿರಿಕ್ ನಡೆದಿದೆ.
ಮಹಮದ್ ಸಮೀರ್ ಎಂಬ ಯುವಕ ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗೆಳೆಯರೊಂದಿಗೆ ಸೇರಿ ನಡುರಸ್ತೆಯಲ್ಲಿ ತಲ್ವಾರ್ ಪ್ರದರ್ಶನ ಮಾಡಿದ್ದಾನೆ. ಮಧ್ಯರಾತ್ರಿಯ ವೇಳೆಗೆ ಸಿನೆಮಾ ಸ್ಟೈಲ್ನಲ್ಲಿ ಕಾರಿನಿಂದ ಕೆಳಗಿಳಿದು ಬಂದ ಸಮೀರ್, ಅಲ್ಲಿಟ್ಟಿದ್ದ ಸುಮಾರು 5 ಕೆಜಿಗೂ ಅಧಿಕ ತೂಕದ ಬೃಹತ್ ಕೇಕ್ ಅನ್ನು ಲಾಂಗ್ನಿಂದ ಕತ್ತರಿಸಿದ್ದಾನೆ.
ಈ ವೇಳೆ ಆತನ ಸುತ್ತ ನೆರೆದಿದ್ದ 10ಕ್ಕೂ ಹೆಚ್ಚು ಯುವಕರು ಜೋರಾಗಿ ಕಿರುಚಾಡುತ್ತಾ ಸಂಭ್ರಮಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಪುಂಡರ ದಂಡು, ಇಡೀ ಘಟನೆಯನ್ನು ಮೊಬೈಲ್ನಲ್ಲಿ ಶೂಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹರಿಬಿಟ್ಟು ರೌಡಿ ಸ್ಟೈಲ್ ಪ್ರದರ್ಶಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭೀತಿ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ಇತ್ತ ವಿಡಿಯೋ ಗಮನಿಸಿ ತಕ್ಷಣವೇ ಎಚ್ಚೆತ್ತ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ ಶಾಂತಿ ಭಂಗ ಉಂಟುಮಾಡಿದ ಆರೋಪದ ಮೇಲೆ ಮುಖ್ಯ ಆರೋಪಿ ಮಹಮದ್ ಸಮೀರ್ ವಿರುದ್ಧ ಪೊಲೀಸರು ಅಧಿಕೃತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

