ಚಿಕ್ಕಮಗಳೂರು: ನೇರಳೆ ಹಣ್ಣಿನ ಮರ ಹತ್ತಿದ ಬಾಲಕ ದುರಂತ ಅಂತ್ಯ ಕಂಡಿರುವ ಘಟನೆ ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನಡೆದಿದೆ.
ಆಕಾಶ್ (13) ಮೃತ ದುರ್ದೈವಿ. 7ನೇ ತರಗತಿ ಆಕಾಶ್ ತನ್ನ ಮೂವರು ಸ್ನೇಹಿತರನ್ನು ಕರೆದುಕೊಂಡು ನೇರಳೆ ಹಣ್ಣು ಕೀಳಲು ಹೋಗಿದ್ದಾರೆ. ಮೂವರು ನೇರಳೆ ಮರ ಹತ್ತಿ ಹಣ್ಣು ಕಿತ್ತಿದ್ದಾರೆ. ಹಣ್ಣು ಕೀಳುವಾಗ ಆಕಾಶ್ ಆಯ ತಪ್ಪಿ ಮರದಿಂದ ಕೆಳಗೆ ಬೀಳುವಾಗ ವಿದ್ಯುತ್ ತಂತಿ ಹಿಡಿದಿದ್ದಾನೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಆಕಾಶ್ ಪ್ರಜ್ಞಾಹೀನನಾಗಿದ್ದಾನೆ.
ಇದನ್ನು ಕಂಡು ಗಾಬರಿಗೊಂಡ ಆಕಾಶ್ ಸ್ನೇಹಿತರು ಈ ವಿಚಾರವನ್ನು ಆತನ ಪೋಷಕರಿಗೆ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೋಷಕರು ಆಕಾಶ್ನನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವಿಧಿಯಾಟ ಚಿಕಿತ್ಸೆ ಫಲಿಸದೆ ಆಕಾಶ್ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

