ಚಿಕ್ಕಬಳ್ಳಾಪುರ: ಮದುವೆಯ ನೆಪದಲ್ಲಿ ಪುರುಷರಿಗೆ ವಂಚನೆ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಚಿಕ್ಕಬಳ್ಳಾಪುರ ಸೈಬರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೋಮಲಾ ಬಂಧಿತ ಮಹಿಳೆಯಾಗಿದ್ದು, ಈಕೆ ಬೆಂಗಳೂರು ಮೂಲದವಳು. 6 ರಿಂದ 7 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಬಳಿಕ ಕೋಮಲಾ ಮೋಜು‌ ಮಸ್ತಿಯ ಜೀವನ ನಡೆಸಲು ಶುರು ಮಾಡಿದಳು. ಇದಕ್ಕಾಗಿ ಮದುವೆಯ ನೆಪ ಇಟ್ಟುಕೊಂಡು ಹಲವು ಪುರುಷರ ಬಳಿ ಹಣ ಪಡೆದು ವಂಚನೆಯ ಜಾಲಕ್ಕೆ ಇಳಿದು ಇದೀಗ ಪೊಲೀಸರು ಬಂಧಿಸಿದ್ದಾರೆ.

ಕೋಮಲಾ ಮೊದಲು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ರಾಘವೇಂದ್ರ ಎಂಬವರನ್ನ ಮ್ಯಾಟ್ರಿಮೋನಿ ವೆಬ್​ಸೈಟ್ ಮೂಲಕ ಪರಿಚಯ ಮಾಡಿಕೊಂಡಳು. ಬಳಿಕ ಆತನಿಂದ 7 ಲಕ್ಷ 40 ಸಾವಿರ ಪೀಕಿದ್ದಳು. ಹೀಗಾಗಿ ರಾಘವೇಂದ್ರ ದೂರಿನ ಮೇರೆಗೆ ಕೋಮಲಾಳನ್ನ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಹೀಗೆ ವಂಚನೆ ಮಾಡಿದ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ.

ಕೆಪಿಟಿಸಿಲ್ ನೌಕರನಾಗಿದ್ದ ಈಕೆಯ ಪತಿ 2017ರಲ್ಲಿ ಮರಣ ಹೊಂದಿದ್ದರು. ಗಂಡ ಮೃತಪಟ್ಟಿರುವ ಕಾರಣ ಆತನ 6 ಕೋಟಿ ಪರಿಹಾರದ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಅಂತ ಹೇಳಿ ಹಣ ವಸೂಲಿ ಮಾಡುತ್ತಿದ್ದಳು. ಸದ್ಯ ಚಿಕ್ಕಬಳ್ಳಾಪುರ ಸೈಬರ್ ಠಾಣೆಯ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ.