ಚಾಮರಾಜನಗರ : ನಾಯಿ ಕಡಿತದಿಂದ ಮೃತಪಟ್ಟಿದ್ದ ಕೋತಿಯ ಅಂತ್ಯ ಸಂಸ್ಕಾರವನ್ನು ಮಾಡಿ ಮಾನವೀಯತೆಯನ್ನು ಯುವಕರು ಮೆರೆದರು.
ಹಿರಿಕಾಟಿ ಗ್ರಾಮ ಯುವಕರಿಂದ ಮಾನವೀಯ ಅಂತ್ಯಸಂಸ್ಕಾರ ಮಾಡಲಾಯಿತು. ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಸಮೀಪ ನಾಯಿ ಕಡಿತಕ್ಕೆ ಕೋತಿ ಒಳಗಾಗಿ ಮೃತಪಟ್ಟಿತ್ತು. ವನ್ಯಜೀವಿಗಳ ಮೇಲಿನ ಕಾಳಜಿ ಮತ್ತು ಧಾರ್ಮಿಕ ಸಂಸ್ಕಾರ ಮೌಲ್ಯ ಸಾರುವ ಉದ್ದೇಶದಿಂದ ಕೋತಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಕೋತಿಯ ಮೃತದೇಹವನ್ನು ಗೌರವಪೂರ್ವಕವಾಗಿ ಯುವಕರು ಮಣ್ಣು ಮಾಡಿದರು. ಹಾಲು–ತುಪ್ಪ ಕಾರ್ಯ, 11ನೇ ದಿನದ ತಿಥಿ ಕಾರ್ಯಗಳನ್ನ ನೆರವೇರಿಸಿ, ನಂತರ ಸಾರ್ವಜನಿಕ ಅನ್ನ ಸಂತರ್ಪಣೆಯನ್ನೂ ಆಯೋಜಿಸಿದ್ದರು.
ಹಿರಿಕಾಟಿ ಗೇಟ್ ಬಳಿಯ ಸಮೀಪ ಕೋತಿ ನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವುದು ಬೆಳಕಿಗೆ ಬಂದಿತು. ಈ ವಿಷಯ ತಿಳಿದ ತಕ್ಷಣ ಗ್ರಾಮದ ಯುವಕರು ಸ್ಥಳಕ್ಕೆ ಆಗಮಿಸಿ, ಯಾವುದೇ ವಿಳಂಬವಿಲ್ಲದೆ ಕೋತಿಯ ಮೃತದೇಹವನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ, ಸಂಪ್ರದಾಯಬದ್ಧ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸಿದರು.
ಮಾನವನಂತೆ ಪ್ರಾಣಿಗಳಿಗೂ ಅಂತ್ಯಸಂಸ್ಕಾರ ನಡೆಸಬೇಕು ಎಂಬ ನಂಬಿಕೆಯೊಂದಿಗೆ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಯುವಕರು ತಿಳಿಸಿದರು. ಅಂತ್ಯಸಂಸ್ಕಾರದ ಬಳಿಕ ಹಾಲು–ತುಪ್ಪ ಕಾರ್ಯವನ್ನು ನೆರವೇರಿಸಲಾಗಿದ್ದು, ನಂತರ 11ನೇ ದಿನದ ತಿಥಿ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ತಿಥಿ ಕಾರ್ಯದ ಅಂಗವಾಗಿ ಗ್ರಾಮಸ್ಥರು, ಸುತ್ತಮುತ್ತಲಿನ ಹಳ್ಳಿಗಳ ಜನರು ಹಾಗೂ ಪ್ರಯಾಣಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

