ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ನಿರಂತರವಾದ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಮಂಗಳವಾರ ತಡರಾತ್ರಿ ಗ್ರಾಮದ ಮಹದೇವಪ್ಪ ಎಂಬ ರೈತನ ಜಮೀನಿಗೆ ಪ್ರವೇಶಿಸಿದ ಕಾಡಾನೆಗಳು ಟೊಮೊಟೊ ಬೆಳೆಯನ್ನ ನಾಶಪಡಿಸಿದ ಹಿನ್ನೆಲೆ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ನಿರಾಸೆ ಉಂಟಾಗಿದೆ.

ಸಾಲಮಾಡಿ ಬೆಳೆ ಮಾಡಿದ್ದ ರೈತರ ಫಸಲು ಕೈ ಸೇರುವ ಮೊದಲೇ ಕಾಡಾನೆಗಳ ಹಾವಳಿಯಿಂದ ಮಣ್ಣುಪಾಲಾಗುತ್ತಿವೆ, ಪ್ರತಿನಿತ್ಯ ಗಜಕಾಟದಿಂದ ನಲುಗಿರುವ ಮಂಚಹಳ್ಳಿ ಭಾಗದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ.

ದಿನಂಪ್ರತಿ ಕಾಡಾನೆಗಳ ಉಪದ್ರವನ್ನ ಸಹಿಸಿ ಸಾಕಾದ ರೈತರು ಆತ್ಮಹತ್ಯೆ ಒಂದೇ ದಾರಿ ನಮಗೆ ದಯಾಮರಣವನ್ನಾದರು ಕರುಣಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ಮನಕರಗದೆ ನಿರ್ಲಕ್ಷ್ಯ ತೋರಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅದೆಷ್ಟೋ ಬಾರಿ ಮನವಿ ಮಾಡುತ್ತಲೇ ಬಂದಿದ್ದರೂ ಸಹ ಆನೆಗಳ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಸ್ಥಳೀಯ ರೈತರು ತಿರುಗಿಬಿದ್ದಿದ್ದಾರೆ.

ಮಂಚಹಳ್ಳಿ ಗ್ರಾಮದಲ್ಲಿ ರೈತರು ಬೆಳೆದಿದ್ದ ಬಾಳೆ ಬೆಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಕಾಡಾನೆಗಳು ತಿಂದು ತೇಗಿವೆ. ಅಲ್ಲದೇ ರೈತರ ಕೃಷಿ ಪಂಪ್‌ಸೆಟ್, ಬೋರ್‌ವೆಲ್, ಶೆಡ್ ಸೇರಿದಂತೆ ಇತರ ಕೃಷಿ ಪರಿಕರಗಳನ್ನು ಕಾಡಾನೆಗಳು ತುಳಿದು ನಾಶಪಡಿಸಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದು ಆನೆಗಳ ಹಾವಳಿ ತಡೆಗಟ್ಟುವಂತೆ ಗ್ರಾಮಸ್ಥರು ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಅರಣ್ಯ ಇಲಾಖೆ ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಸಿಬ್ಬಂದಿಗಳನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ, ಇದೇ ವೇಳೆ ಕೆಲ ರೈತರು ಮಾತನಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳ ನಡೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.