ಗುಂಡ್ಲುಪೇಟೆ : ತಾಲ್ಲೂಕಿನ ಯಡವನಹಳ್ಳಿ ಗ್ರಾಮದ ನಂಜುಂಡೇಶ್ವರ ನ್ಯಾಯಬೆಲೆ ಅಂಗಡಿ ಅಮಾನತು ಆದೇಶ ರದ್ದು ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಜಮಾವಣೆಗೊಂಡ ಕಾರ್ಯಕರ್ತರು ತಹಸೀಲ್ದಾರ್ ಮತ್ತು ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂಧರ್ಭದಲ್ಲಿ ರೈತ ಸಂಘಟನೆ ಉತ್ತಂಗೇರಿಹುಂಡಿ ಮಹೇಶ್ ಮಾತನಾಡಿ,ಯಡವನಹಳ್ಳಿ ಗ್ರಾಮದ ನಂಜುಂಡೇಶ್ವರ ನ್ಯಾಯ ಬೆಲೆ ಅಂಗಡಿ ಮಾಲೀಕ ಗುರುಸ್ವಾಮಿ ಪಡಿತರದಾರರಿಗೆ ತೂಕದಲ್ಲಿ ಕಡಿಮೆ ಅಕ್ಕಿ ನೀಡುವುದು ಹಾಗೂ ಪಡಿತರದಾರರಿಗೆ ಆಹಾರ ಪದಾರ್ಥಗಳ ನೀಡಲು ಹತ್ತು ರೂಪಾಯಿ ಪಡೆಯುತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ ಹಿನ್ನೆಲೆ ಚಾಮರಾಜನಗರ ಆಹಾರ ಇಲಾಖೆಯ ಉಪ ನಿರ್ದೇಶಕರು ಆತನ ಪರವಾನಗಿಯನ್ನು ರದ್ದು ಮಾಡಲಾಗಿತ್ತು.
ತದನಂತರ ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ಅಮಾನತು ಆದೇಶವನ್ನು ರದ್ದು ಮಾಡಿ ಅದೇ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳು ತೆಗೆದುಕೊಳ್ಳುವಂತೆ ಹೇಳಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೊಣಕನಪುರ ಗ್ರಾಮದ ಸಿದ್ದರಾಜು ಮಾತನಾಡಿ,ನಂಜುಡೇಶ್ವರ ನ್ಯಾಯಬೆಲೆ ಅಂಗಡಿ ವಿರುದ್ಧ ಹೊಣಕನಪುರ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ದೂರು ನೀಡಿದ ಹಿನ್ನೆಲೆ ಶೀರಸ್ತೆದಾರರು ಪರಿಶೀಲನೆ ಮಾಡಿ ಆಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ವರದಿಯನ್ನು ಸಲ್ಲಿಸಿದ್ದರು ಅದರಂತೆಯೇ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರು ನಂಜುಂಡೇಶ್ವರ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಅಮಾನತು ಮಾಡಿದ್ದರು.
ಆದರೆ ಅಮಾನತು ಆದೇಶವನ್ನು ರದ್ದುಗೊಳಿಸಿರುವ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಲು ನಿರಾಕರಿಸಿದ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿಕೊಂಡಿದ್ದರು ಅದರಂತೆ ಶಾಸಕರು ಆಹಾರ ಇಲಾಖೆಯ ಶೀರಸ್ತೆದಾರ್ ಅವರಿಗೆ ಹೊಣಕನಪುರ ಗ್ರಾಮಸ್ಥರಿಗೆ ಬೇರೆ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳನ್ನು ಪಡೆಯಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು ಸಹ ತಾಲೂಕು ಆಹಾರ ಇಲಾಖೆಯ ಅಧಿಕಾರಿಗಳು ಪುನಃ ನಂಜುಂಡೇಶ್ವರ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವಂತೆ ಹೇಳಿರುವುದರ ವಿರುದ್ಧ ಅನಿರ್ದಿಷ್ಟವಧಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಯಡವನಹಳ್ಳಿ ಹೊಣಕನಪುರ ಗ್ರಾಮಸ್ಥರು ಸೇರಿದಂತೆ ರೈತ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

