ಗುಂಡ್ಲುಪೇಟೆ : ತಾಲೂಕಿನ ಪಡಗೂರು ಗ್ರಾಮದ ರೈತರ ಜಮೀನಿನಲ್ಲಿ ಹಾಡಹಗಲೇ ಹುಲಿ ಓಡಾಟ ನಡೆಸಿದೆ. ಇದರಿಂದ ಗ್ರಾಮಸ್ಥರು ಹಾಗೂ ರೈತರು ಭಯಭೀತರಾಗಿದ್ದಾರೆ.

ಪಡಗೂರು ಗ್ರಾಮದ ರೈತ ಮುಖಂಡ ಶಿವಕುಮಾರ್ ಎಂಬುವವರ ಜಮೀನಿನ ಬಳಿ ಶುಕ್ರವಾರ ಬೆಳಂಬೆಳಗ್ಗೆ 6 ಗಂಟೆ ಸಮಯದಲ್ಲಿ ಹುಲಿ ರಾಜಾರೋಷವಾಗಿ ನಡೆದುಕೊಂಡು ಹೋಗಿದೆ. ಈ ದೃಶ್ಯವನ್ನು ರೈತರು ಸೆರೆ ಹಿಡಿದಿದ್ದು, ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಆಗಾಗ್ಗೆ ಕಾಣಿಸಿಕೊಳ್ಳುವ ಹುಲಿ-ಚಿರತೆ: ಪಡಗೂರು ಸುತ್ತಮುತ್ತಲು ಹುಲಿ-ಚಿರತೆ ಚಲನವಲ ವಿಪರೀತವಾಗಿದ್ದು, ಆಗಾಗ್ಗೆ ರೈತರ ಕಣ್ಣಿಗೆ ಕಾಣಸಿಕೊಳ್ಳುತ್ತಿದೆ. ಮೇಕೆ-ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ತಿಂದು ಹಾಕುತ್ತಿವೆ. ಇದರಿಂದ ರೈತರು ರೋಸಿ ಹೋಗಿದ್ದಾರೆ.

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ: ಪಡಗೂರು ಭಾಗದಲ್ಲಿ ಹುಲಿ ಮತ್ತು ಚಿರತೆ ಕಾಟ ಹೆಚ್ಚಿರುವ ಕುರಿತು ರೈತರು ಹಾಗೂ ಗ್ರಾಮಸ್ಥರಿಂದ ದೂರು ಹೋದ ಸಂದರ್ಭದಲ್ಲಿ ನೆಪಮಾತ್ರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರಳುತ್ತಿದ್ದಾರೆ. ಕೆಲ ಕಡೆ ಒತ್ತಾಯದ ಮೇರೆಗೆ ಬೋನ್ ಅಳವಡಿಕೆ ಮಾಡುತ್ತಾರೆ ವಿನಃ ವನ್ಯ ಮೃಗಗಳನ್ನು ಸೆರೆ ಹಿಡಿಯುವ ಕೆಲಸ ಮಾಡುತ್ತಿಲ್ಲ ಎಂದು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.