ಚಾಮರಾಜನಗರ: ಜಮೀನಿನ ಪಂಪ್ ಸೆಟ್ ಮನೆಗೆ ನುಗ್ಗಿದ ಚಿರತೆ ಸೆರೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗಂಗಪ್ಪ ಎಂಬುವರ ಜಮೀನಿನ ಪಂಪ್ ಸೆಟ್ ಮನೆಯಲ್ಲಿ ಚಿರತೆ ಅಡಗಿತ್ತು. ಮೋಟರ್ ಆನ್ ಮಾಡಲು ಹೋದಾಗ ಚಿರತೆ ನೋಡಿ ತಕ್ಷಣ ಬಾಗಿಲು ಮುಚ್ಚಿಕೊಂಡು ರೈತ ಹೊರ ಬಂದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ, ರೂಮಿನಲ್ಲಿದ್ದ ಚಿರತೆ ಸೆರೆ ಹಿಡಿದಿದ್ದಾರೆ. ರೈತ ಗಂಗಪ್ಪ ಅವರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.