ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಹಲವೆಡೆ ಕಳ್ಳತನ ಎಸಗಿದ್ದ ನಾಲ್ವರು ಅಂತರಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು, ನಗದು ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಮೈಸೂರಿನ ಅರ್ಜುನ್, ಎಂ.ಎನ್. ಚೇತನ್, ಗೋವಿಂದ ಹಾಗೂ ಪಾಂಡವಪುರದ ಕೆ. ಪರಮೇಶ್ ಎಂದು ಗುರುತಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಅಂಬಳೆ ಗ್ರಾಮದ ಚಾಮುಂಡೇಶ್ವರಿ ದೇಗುಲದ ಬೀಗ ಮುರಿದಿದ್ದ ಕಳ್ಳರು, ದೇವಿಯ ಆಭರಣ ಹಾಗೂ ಕಾಣಿಕೆ ಹಣವನ್ನು ದೋಚಿದ್ದರು. ಈ ಬಗ್ಗೆ ದೇವಾಲಯದ ಮಂಡಳಿಯ ಪಿ. ಪ್ರಭುಸ್ವಾಮಿ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಧರ್ಮೇಂದ್ರ ಹಾಗೂ ಸಿಪಿಐ ಸುಬ್ರಹ್ಮಣ್ಯ ನೇತೃತ್ವದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಗಳಿಂದ 10 ಗ್ರಾಂ ಚಿನ್ನದ ತಾಳಿ, ಒಂದು ಗ್ರಾಂ ತೂಕದ ಉಂಗರ, 93 ಗ್ರಾಂ ಬೆಳ್ಳಿ 2, 04,900 ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಒಟ್ಟು ಮೌಲ್ಯ 4,00 400ರೂ. ಆಗಿದೆ ಎಂದು ಅಂದಾಜಿಸಲಾಗಿದೆ