ಗುಂಡ್ಲುಪೇಟೆ : ಯಾವೊಬ್ಬ ವ್ಯಕ್ತಿಯು ಸಹ ಉತ್ತಮ ಭವಿಷ್ಯವನ್ನ ರೂಪಿಸಿಕೊಳ್ಳಲು ಶಿಕ್ಷಣ ಬಹಳ ಮುಖ್ಯವಾಗುತ್ತದೆ ಹಾಗೆಯೇ ಉಪನ್ಯಾಸ ನೀಡುವ ಗುರುಗಳ ಪಾತ್ರವೂ ಸಹ ಅಷ್ಟೇ ಪ್ರಾಮುಖ್ಯತೆ ಪಡೆದಿರುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಜಿಲ್ಲಾಡಳಿತ –  ಜಿಲ್ಲಾ ಪಂಚಾಯತ್ ಚಾಮರಾಜನಗರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ದೀಪಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರಾಧಾಕೃಷ್ಣನ್ ಅವರನ್ನ ಸ್ಮರಿಸುವಂತ ದಿನವನ್ನ ನಾವೆಲ್ಲರೂ ಒಟ್ಟಾಗಿ ಸೇರಿ ಆಚರಿಸಿ ಗೌರವ ಸಮರ್ಪಣೆ ಮಾಡುತ್ತೇವೆ, ಇಂದು ನಾನು ಸಹ ಶಾಸಕನಾಗಿರಲು ಶಿಕ್ಷಕರ ಪಾತ್ರ ದೊಡ್ಡದು, ಈ ದಿನವನ್ನ ನಾವು ನಮ್ಮ ತಂದೆಯವರ ಕಾಲದಿಂದಲೂ ಆಚರಿಸುತ್ತ ಬಂದಿದ್ದೇವೆ ಎಂದರು.

ಸದ್ಯಕ್ಕೆ ಶಿಕ್ಷಕರ ಬೇಡಿಕೆಯನ್ನ ಈಡೇರಿಸಲು ಪ್ರಯತ್ನ ಮಾಡುತ್ತೇನೆ, ಭವನದ ದುರಸ್ತಿಗೆ ಅನುದಾನವನ್ನ ನೀಡುವ ಮೂಲಕ ಸೌಕರ್ಯ ಒದಗಿಸಲು ಬದ್ದ ಎಂದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು 2022 – 23 ನೇ ಸಾಲಿನಲ್ಲಿ ಐದು ಕೋಟಿ ಅನುದಾನವನ್ನ ತಂದಿದ್ದು ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ ಮುಂದಿನ ದಿನಗಳಲ್ಲಿ  ಸಚಿವರ ಜೊತೆ ಚರ್ಚಿಸಿ ಹೆಚ್ಚಿನ ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು.

ಕ್ಷೇತ್ರದಲ್ಲಿ ಡಿಗ್ರಿ ಪಿಯು ಕಾಲೇಜುಗಳನ್ನ ಅಭಿವೃದ್ಧಿ ಪಡಿಸಲು ಸಾಕಷ್ಟು ಅನುದಾನ ತರಲಾಗಿದೆ, ಎಲ್ಲವನ್ನು ಸುಧಾರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ನಮ್ಮ ಕ್ಷೇತ್ರದಲ್ಲಿ ಹೆಚ್ಚು ವಸತಿ ಶಾಲೆಗಳು , ಅಂಭೆಡ್ಕರ್ ಶಾಲೆಗಳಿವೆ, ಬೊಮ್ಮನಹಳ್ಳಿ ಗ್ರಾಮದಲ್ಲಿ 18 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲಾಗಿದೆ ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.