ಚಾಮರಾಜನಗರ: ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವವು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ರಥೋತ್ಸವವು ದೇವಸ್ಥಾನದ ಮುಂಭಾಗದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಜರುಗಿತು.

ಇದೇ ವೇಳೆ ಶ್ರೀ ಚಾಮರಾಜೇಶ್ವರ ರಥೋತ್ಸವದಲ್ಲಿ ಸಾವಿರಾರು ಮಂದಿ ನವಜೋಡಿಗಳು ಭಾಗಿಯಾಗಿ ರಥೋತ್ಸವಕ್ಕೆ ಹಣ್ಣು ಧವನ ಎಸೆಯುವ ಮೂಲಕ ರಥೋತ್ಸವಕ್ಕೆ ಮೆರಗು ನೀಡಿದರು. ಅಲ್ಲದೆ ನವದಂಪತಿಗಳು ರಥಕ್ಕೆ ಹಣ್ಣು ಧವನ ಎಸೆದರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ನಂಬಿಕೆ ಇದೆ.

ರಥೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಭಕ್ತಾದಿಗಳಿಗೆ ಸಂತರ್ಪಣ ವ್ಯವಸ್ಥೆ ಅಲ್ಲಲ್ಲಿ ನಡೆಯಿತು. ರಥೋತ್ಸವ ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮಗಳು ಹಾಗೂ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.