ಚಾಮರಾಜನಗರ: ನಾವ್ಯಾಕೆ ದೇವೇಗೌಡರ ಸಾವು ಬಯಸುತ್ತೇವೆ? ಅವರ ಮನೆಯಲ್ಲಿ ನಡೆದಿರುವ ಅನಾಹುತಕ್ಕೆ ನಾವು ಕಾರಣವೇ? ಅವು ಅವರ ಮನೆಯವರೇ ಮಾಡಿಕೊಂಡ ಅನಾಹುತಗಳು’ ಎಂದು ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪ್ರತಿಪಾದಿಸಿದರು.

‘ಕಾಂಗ್ರೆಸ್‌ ದೇವೇಗೌಡರ ಸಾವು ಬಯಸುತ್ತಿದೆ’ ಎಂಬ ಜೆಡಿಎಸ್‌ ಆರೋಪದ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ವೆಂಕಟೇಶ್, ‘ಅವರು ಮೂರ್ಖರಂತೆ ಮಾತನಾಡುತ್ತಿದ್ದಾರೆ. ಘಟನೆಯಿಂದ ದೇವೇಗೌಡರ ಮನಸ್ಸಿಗೆ ನೋವಾಗಿರುತ್ತದೆ. ಅವರು ಇನ್ನೂ ಹತ್ತಾರು ವರ್ಷ ಬದುಕಲಿ. ನಮಗೆ ತೊಂದರೆಯಿಲ್ಲ’ ಎಂದರು.

‘ದೇವರಾಜೇಗೌಡ ಜೈಲಿನಿಂದ ಹೊರಬಂದರೆ ಸರ್ಕಾರ ಬಿದ್ದು ಹೋಗುತ್ತದೆ’ ಎಂಬ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ದೇವರಾಜೇಗೌಡರಂತಹ ನೂರು ಜನ ಜೈಲಿಂದ ಹೊರಬಂದರೂ ಸರ್ಕಾರ ಬೀಳುವುದಿಲ್ಲ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್‌ಡ್ರೈವ್ ಹಂಚಿರುವುದು ಬಿಜೆಪಿಯ ಕುತಂತ್ರ. ಪೆನ್‌ಡ್ರೈವ್ ಇದೆ ಎಂದು ಹೇಳುತ್ತಿದ್ದವರು ದೇವರಾಜೇಗೌಡ. ಅವರೇ ಅದನ್ನು ಹೊರಗಡೆ ಬಿಟ್ಟಿರಬೇಕು. ಅವರ ಬಳಿ ಏನೇ ಸಾಕ್ಷಿ ಇದ್ದರೂ ಎಸ್‌ಐಟಿಗೆ ಕೊಡಲಿ. ಯಾರಾದರೂ ಕುತಂತ್ರ ಮಾಡಿರುವ ಸಾಕ್ಷಿ ಇದ್ದರೂ ಕೊಡಲಿ. ಪ್ರಜ್ವಲ್ ನಮ್ಮ ದೇಶದಲ್ಲಿ ಇಲ್ಲದಿರುವುದರಿಂದ ಬಂಧನ ಸಾಧ್ಯವಾಗಿಲ್ಲ’ಎಂದರು.

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ‘ಕೆಟ್ಟದ್ದಕ್ಕೆ ಮಾತ್ರ ಡಿಕೆಶಿ ಹೆಸರು ಸೇರಿಸಲಾಗುತ್ತಿದೆ. ಅವರು ಮಾಡಿರುವ ಒಳ್ಳೆಯದ್ದರ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಅವರು ಮಾಡಿರುವ ಒಳ್ಳೆಯದ್ದಕ್ಕೂ ಅವರ ಹೆಸರು ಸೇರಿಸಬೇಕಲ್ಲಾ’ ಎಂದು ಪ್ರಶ್ನಿಸಿದರು.