ಚಾಮರಾಜನಗರ : ರಾಜ್ಯದ ಮೇಕೆದಾಟಿನಲ್ಲಿ ಕುಡಿಯುವ ನೀರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರವು ಕ್ರಿಯಾಯೋಜನೆ ಸಿದ್ದಪಡಿಸಿದ್ದು, ಅದನ್ನು ವಿರೋಧಿಸಿದ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ದ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಶ್ರೀ ಭುವನೇಶ್ವರಿ ವತ್ತದಲ್ಲಿ ಜಮಾಯಿಸಿದ ಕನ್ನಡ ಪರ ಸಂಘಟನೆಯ ಮುಖಂಡರುಗಳು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ದ ಘೋಷಣೆ ಕೂಗಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕ ಸರ್ಕಾರವು ಅಂತರಾಜ್ಯ ಗಡಿ ಭಾಗದಲ್ಲಿ ಅಭಿವೃದ್ದಿ ಯೋಜನೆ ಕೈಗೊಂಡಾಗೆಲ್ಲ, ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ದಿ. ಕರುಣಾನಿಧಿ, ದಿ. ಜೆ. ಜಯಲಲಿತಾರವರು ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಬಗ್ಗೆ ಅಂದಿನಿಂದಲೂ ನಿರಂತರವಾಗಿ ಕರ್ನಾಟಕದಲ್ಲಿ ಹೋರಾಟ ನಡೆಸಲಾಗುತ್ತಿತ್ತು.
ಪ್ರಸ್ತುತ ಮೇಕೆದಾಟು ಯೋಜನೆಗೆ ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ರವರು ವಿರೋಧ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ಗೂ ಸಹ ಹೋಗಿದ್ದರು. ಆದರೆ ಸುಪ್ರಿಂ ಕೋರ್ಟ್ನಲ್ಲಿ ರಾಜ್ಯದ ಪರವಾಗಿ ತೀರ್ಪುಬಂದಿದೆ. ಇದನ್ನು ಸಹಿಸಲಾಗದ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ರವರು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಲು ಪ್ರಯತ್ನಿಸಿ ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿರುವುದು ಖಂಡನೀಯ ಎಂದರು.
ಮೇಕೆದಾಟು ನಲ್ಲಿ ಕರ್ನಾಟಕ ಸರ್ಕಾರವು ರೂಪಿಸಿರುವ ಯೋಜನೆಯಿಂದ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿಗೆ ನೀರು ಹಾಗೂ ಏಳೆಂಟು ಜಿಲ್ಲೆಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಹರಿಯಲಿದೆ, ಇದನ್ನು ಅರಿಯದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ರವರು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ , ಮೇಕೆದಾಟು ಯೋಜನೆಗೆ ವಿರೋಧ ಮುಂದುವರೆಸಿದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

