ಚಾಮರಾಜನಗರ : ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಬೇಡಗುಳಿ ಸಮೀಪದ ರಾಮಯ್ಯನ ಪೋಡಿನಲ್ಲಿ ಹುಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಪುಣಜನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವಾಸಿ ರವಿ ಮೇಲೆ ದಾಳಿ ನಡೆಸಿದ್ದು, ಹುಲಿ ದಾಳಿಯಿಂದ ತಲೆ ಮತ್ತು ಮೈ ಕೈ ಹಾಗೂ ಕಾಲುಗಳಿಗೆ ಪೆಟ್ಟಾಗಿದೆ.
ಹುಲಿ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತ ಅರಣ್ಯಾಧಿಕಾರಿ ಹೀರಲಾಲ್, ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ರವರು ಗಾಯಾಳು ರವಿರವರನ್ನು ಚಾಮರಾಜನಗರ ಸರ್ಕಾರಿ ಭೋದನಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಅರಣ್ಯಾಧಿಕಾರಿಗಳು ಸಕಾಲದಲ್ಲಿ ಹುಲಿ ದಾಳಿಗೆ ತುತ್ತಾಗಿರುವ ರವಿರವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ. ಗಾಯಾಳುಗೆ ಸಿಟಿಸಿ ಸ್ಕ್ಯಾನ್ ಮಾಡಲಾಗಿದ್ದು, ವರದಿಗಾಗಿ ಅರಣ್ಯಾಧಿಕಾರಿಗಳು ಕಾಯುತ್ತಿದ್ದಾರೆ.
ಹುಲಿ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿರವರನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಹೆಚ್.ಎಸ್. ಬಿಂದ್ಯಾ ಬೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬೇಡಗುಳಿಯಲ್ಲಿ ರಾಮಯ್ಯನ ಪೋಡಿನಲ್ಲಿ ಹುಲಿ ದಾಳಿಯಿಂದ ಕಂಗಲಾಗಿರುವ ನಿವಾಸಿಗಳು ತಾತ್ಕಾಲಿಕವಾಗಿ ಬೇಡಗುಳಿಯಲ್ಲಿನ ಆಶ್ರಮ ಶಾಲೆಯಲ್ಲಿ ಆಶ್ರಯ ಪಡೆಯಲು ಮನವಿ ಮಾಡಿದ್ದಾರೆ.
ಪ್ರಸ್ತುತ ಹುಲಿ ದಾಳಿಯ ಸ್ಥಳದ ಸುತ್ತ ಮುತ್ತಲು ಸಾರ್ವಜನಿಕರು ತಿರುಗಾಡುವುದನ್ನು ನಿಷೇಧಿಸಲಾಗಿದ್ದು, ಇಲ್ಲಿ ವಾಸ ಮಾಡುವ ಕುಟುಂಬಗಳಿಗೆ ದಾಳಿ ಮಾಡಿದ ಹುಲಿ ಸೆರೆಯಾಗುವ ತನಕ ತಾತ್ಕಾಲಿಕವಾಗಿ ಆಶ್ರಮ ಶಾಲೆಯಲ್ಲಿ ಆಶ್ರಯ ನೀಡುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಚರಣೆಯನ್ನು ಆರಂಭಿಸಿದೆ.

