ಚಾಮರಾಜನಗರ: ಅರಣ್ಯ ಸಂಪತ್ತು ಮತ್ತು ವಿವಿಧ ಜೀವಿಗಳ ಆವಾಸ ಸ್ಥಾನವಾಗಿರುವ ಜಿಲ್ಲೆಯ ಕೆ.ಗುಡಿಯು  ವನ್ಯಪ್ರಾಣಿ ಮಾತ್ರವಲ್ಲದೆ ಅಪರೂಪದ ಪಕ್ಷಿಗಳಿಗೂ ಆಶ್ರಯತಾಣವಾಗಿಯೂ ಗಮನಸೆಳೆಯುತ್ತದೆ. ಇಲ್ಲಿ ಆಗೊಮ್ಮೆ ಈಗೊಮ್ಮೆ ಅಪರೂಪದ ಪಕ್ಷಿಗಳು ಕಾಣಸಿಗುವುದು ಇಲ್ಲಿನ ವಿಶೇಷತೆಯಾಗಿದೆ.

ಅಳಿವಿನಂಚಿನಲ್ಲಿರುವ ಬಹಳಷ್ಟು ಪಕ್ಷಿಗಳು ಇಲ್ಲಿ ಕಾಣಿಸಿಕೊಂಡು ಪಕ್ಷಿಪ್ರಿಯರನ್ನು ಸೆಳೆಯುತ್ತದೆ. ಹೀಗಾಗಿಯೇ ಕೆ.ಗುಡಿಗೆ ಪ್ರಾಣಿ ಮತ್ತು ಪಕ್ಷಿಪ್ರಿಯರು ಆಗಾಗ್ಗೆ ಬರುತ್ತಲೇ ಇರುತ್ತಾರೆ. ಹೀಗೆ ಬಂದವರು ಇಲ್ಲಿ ಅಡ್ಡಾಡಿ ವಿವಿಧ ಪ್ರಾಣಿ, ಪಕ್ಷಿಗಳನ್ನು ನೋಡಿಕೊಂಡು ಮತ್ತು ಅವುಗಳ ವಿಶೇಷತೆಯನ್ನು ಅರಿತುಕೊಂಡು ಹೋಗುವುದು ಮಾಮೂಲಿಯಾಗಿದೆ. ಇತ್ತೀಚೆಗೆ ಇಲ್ಲಿನ ಮರದ ಮೇಲೆ ಕುಳಿತಿದ್ದ ಹಾರ್ನ್‌ ಬಿಲ್ ಎಲ್ಲರ ಗಮನಸೆಳೆದಿತ್ತು.

ಹಾಗೆನೋಡಿದರೆ ಕೆ.ಗುಡಿ ಅರಣ್ಯವಲಯದಲ್ಲಿ ಹಲವು ಬಗೆಯ ಪಕ್ಷಿಗಳು ಇಲ್ಲಿದ್ದು, ತಮ್ಮ ಆವಾಸ ಸ್ಥಾನವನ್ನು ಇವು ಆಗಾಗ್ಗೆ ತಮ್ಮ ಇರುವಿಕೆಯನ್ನು ವೀಕ್ಷಕರ ಕ್ಯಾಮರಾಗಳಲ್ಲಿ ಸೆರೆಯಾಗುವ ಮೂಲಕ ಖಚಿತಪಡಿಸುವುದು ಕಂಡು ಬರುತ್ತಿದೆ. ಪಕ್ಷಿಗಳ ಸಂತತಿಯನ್ನು ಉಳಿಸುವ ಸಲುವಾಗಿ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ರಾಜ್ಯಮಟ್ಟದ ಪಕ್ಷಿ ಹಬ್ಬ ಹಮ್ಮಿಕೊಳ್ಳಲಾಗುತ್ತಿರುವುದು ವಿಶೇಷವಾಗಿದೆ. 2021ರಲ್ಲಿ ಪಕ್ಷಿ ಗಣತಿಯಲ್ಲಿ ಎರಡು ಬಗೆಯ ಅಪರೂಪದ ಪಕ್ಷಿಗಳು ಪತ್ತೆಯಾಗಿದ್ದವು. ಮೊದಲ ಬಾರಿಗೆ ಗ್ರೇಟ್ ಹಾರ್ನ್‌ ಬಿಲ್ ಪಕ್ಷಿ ಕಾಣಿಸಿಕೊಂಡಿತ್ತು. ಒಟ್ಟಾರೆ ಇಲ್ಲಿನ ಅರಣ್ಯದಲ್ಲಿ ಅಡ್ಡಾಡಿದರೆ ಹತ್ತಾರು ಪಕ್ಷಿಗಳು ಕಾಣಿಸುವುದಂತು ನಿಜ.