ಚಾಮರಾಜನಗರ: ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಬುದ್ಧನಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಗ್ರಾಮಕ್ಕೆ ಕರ್ನಾಟಕ ಭೀಮ್ ಸೇನೆ ನಂಜನಗೂಡು ತಾಲ್ಲೂಕು ಘಟಕದ ಪದಾಧಿಕಾರಿಗಳು ಭೇಟಿ ನೀಡಿದರು.

ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ಲೇಕ್ಸ್ ಮತ್ತು ಬುದ್ಧರ ಮೂರ್ತಿಗೆ ಅಪಮಾನ ಮಾಡುವುದನ್ನು ಕರ್ನಾಟಕ ಭೀಮ್ ಸೇನೆ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ನಂಜನಗೂಡು ತಾಲ್ಲೂಕು ಅಧ್ಯಕ್ಷ ಬಾಣೂರು ಶಿವಸ್ವಾಮಿ ಮಾತನಾಡಿ, ಜ್ಯೋತಿಗೌಡನಪುರ ಗ್ರಾಮಸ್ಥರ ಜೊತೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತೇವೆ.

ರಾಷ್ಟ್ರ ನಾಯಕರಿಗೆ ಅಪಮಾನ ಮಾಡಿದವರನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಪೊಲೀಸ್ ಇಲಾಖೆ ಘಟನೆ ನಡೆದು ಇಷ್ಟು ದಿನಗಳಾದರೂ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಿಲ್ಲ. ಇದರ ಬಗ್ಗೆ ಯಾವುದೇ ನಮ್ಮ ಸಮುದಾಯದ ರಾಜಕೀಯ ನಾಯಕರು ಹೇಳಿಕೆ ನೀಡುತ್ತಿಲ್ಲ. ಇನ್ನು ಮುಂದಾದರು ಸಮುದಾಯದ ಶಾಸಕರು , ಸಂಸದರು, ಸಚಿವರು ಈ ಘಟನೆಯನ್ನು ಖಂಡಿಸಿ ಕಿಡಿಗೇಡಿಗಳನ್ನು ಬಂಧಿಸಲು ಸಹಕಾರ ನೀಡಬೇಕು. ಕಿಡಿಗೇಡಿಗಳನ್ನು ಬಂಧಿಸಲು ವಿಫಲವಾದಲ್ಲಿ ನಮ್ಮ ಸಂಘಟನೆಯೂ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಳ್ಳೂರು ಪ್ರಕಾಶ್ ಮಾತನಾಡಿ, ಕಿಡಿಗೇಡಿಗಳು ಅಂಬೇಡ್ಕರ್ ಹಾಗೂ ಬುದ್ಧನಿಗೆ ಅಪಮಾನ ಮಾಡಿರುವುದು ನಮಗೆ ತುಂಬಾ ನೋವುಂಟಾಗಿದೆ. ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು ಹಾಗೂ ರಾಷ್ಟ್ರ ನಾಯಕರಿಗೆ ಅಪಮಾನದ ಬಗ್ಗೆ ಸರ್ಕಾರವು ವಿಶೇಷ ಕಾನೂನು ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೇನೆಯ ಮೈಸೂರು ಜಿಲ್ಲಾ ಪ್ರಧಾನಕಾರ್ಯದರ್ಶಿ ಮುಳ್ಳೂರು ಪ್ರಕಾಶ್, ಗೌರವಾಧ್ಯಕ್ಷ ಶಂಬಯ್ಯ, ನಂಜನಗೂಡು ತಾಲ್ಲೂಕು ಗೌರವಾಧ್ಯಕ್ಷ ದಿವಾಕರ್ ದೇವನೂರು, ಕಾರ್ಯದರ್ಶಿ ಸೋಮೇಶ್ ಸೇರಿದಂತೆ ಹಲವರು ಹಾಜರಿದ್ದರು.