ಚಾಮರಾಜನಗರ: ಅಕ್ರಮವಾಗಿ ಕ್ಯಾಂಟರ್ ವಾಹನದಲ್ಲಿ ಸಾಗಿಸುತ್ತಿದ್ದ ಎಮ್ಮೆಗಳು ಮತ್ತು ಗೋವುಗಳನ್ನು ರಕ್ಷಣೆ ಮಾಡುವಲ್ಲಿ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ವಾಹನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯರಾತ್ರಿ ಸಮಯದಲ್ಲಿ ನಂಜನಗೂಡು ರಸ್ತೆಯಿಂದ ತಾಳವಾಡಿ ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ಗೋವುಗಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ 112‌ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಟ್ಟಣ ಠಾಣೆ ಪೊಲೀಸರು ಚಾಮರಾಜನಗರದ ಎಲ್ಐಸಿ ಕಚೇರಿಯ ಹತ್ತಿರ ಗೋವುಗಳನ್ನು ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಈ ವೇಳೆ 16 ಎಮ್ಮೆಗಳು ಮತ್ತು 3 ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದು ಕಂಡು ಬಂದಿದ್ದು, ಎಮ್ಮೆಗಳು ಮತ್ತು ಗೋವುಗಳನ್ನು ರಕ್ಷಣೆ ಮಾಡಿ, ವಾಹನ ಮತ್ತು ಚಾಲಕ ಮೈಸೂರು ಮೂಲದ ವ್ಯಕ್ತಿ ಅತಿಕ್ ಎಂಬಾತನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.