ಗುಂಡ್ಲುಪೇಟೆ : ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಗೋಡೌನ್ ಮೇಲೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಂದಾಜು 7 ಟನ್ ಅಕ್ಕಿ ಮತ್ತು ರಾಗಿ ವಶಕ್ಕೆ ಪಡೆದ ಘಟನೆ ಪಟ್ಟಣದ ಹೊಸೂರು ರಸ್ತೆಯಲ್ಲಿ ನಡೆದಿದೆ.

ಪಟ್ಟಣದ ಏಜಸ್, ಅನಿಸ್, ರಾಮು ಆರೋಪಿಗಳಾಗಿದ್ದು, ಮೂವರು ಪಟ್ಟಣದ ಹೊಸೂರು ರಸ್ತೆಯಲ್ಲಿ ಗೋಡೌನ್ ವೊಂದನ್ನು ಬಾಡಿಗೆ ಪಡೆದು ಎರಡು ರೂಂಗಳಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಶೇಖರಣೆ ಮಾಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 142 ಮೂಟೆ ಪಡಿತರ ಅಕ್ಕಿ ಮತ್ತು 10 ಮೂಟೆ ರಾಗಿ ಇರುವುದು ಕಂಡು ಬಂದಿದೆ.
ಒಟ್ಟು 152 ಮೂಟೆಗಳನ್ನು ಕೂಡಲೇ ವಶಕ್ಕೆ ಪಡೆದಿದ್ದಾರೆ ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕರಾದ ಪೂರ್ಣಿಮಾ, ಸಬ್ ಇನ್ಸ್ ಪೆಕ್ಟರ್ ಸಾಹೇಬಗೌಡ, ಎಎಸ್ಐ ಕುದೇರು ಮಹೇಶ್, ಮುಖ್ಯ ಪೇದೆ ಸಿದ್ದೇಶ್, ನಟೇಶ್ ಭಾಗವಹಿಸಿದ್ದರು.

