ಚಾಮರಾಜನಗರ: ಎಸಿ, ಡಿವೈಎಸ್ಪಿ ಮತ್ತು ಪಿಡಿಒ ಅಧಿಕಾರಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡುವಂತೆ ಆಗ್ರಹಿಸಿ ಅ.24 ರಂದು ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಸಂದೇಶ್ ನೇತೃತ್ವದಲ್ಲಿ ಬದನಗುಪ್ಪೆ ಗ್ರಾಮದಿಂದ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು  ವಿಶ್ವರತ್ನ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಬಳಗ ಪತ್ರಿಕಾ ಪ್ರಕಟಣೆಯನ್ನು ನೀಡಿದೆ.

ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ನಾಮಫಲಕ ಅಳವಡಿಸಿರುವ ವಿಚಾರದಲ್ಲಿ ಶಾಂತಿ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳು ಮತ್ತು ಡಿವೈಎಸ್ಪಿ ರವರು ಯಾರು ಒಪ್ಪದಿದ್ದರೂ ಅಂಬೇಡ್ಕರ್ ಅವರ ನಾಮಫಲಕವನ್ನು ತೆರವುಗೊಳಿಸುವುದಾಗಿ ಆದೇಶ ಹೊರಡಿಸುತ್ತೇವೆ ಎಂದು ಸಭೆಯಲ್ಲಿ ಸರ್ವಾಧಿಕಾರಿಯಂತೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಸಂದೇಶ್ ಬದನಗುಪ್ಪೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಸಂದೇಶ್ ಮಾತನಾಡಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ನಾಮಫಲಕವನ್ನು ತೆರವುಗೊಳಿಸುತ್ತೇವೆ ಎಂದು ಗ್ರಾಮಸ್ಥರಿಗೆ ಹೇಳಿಕೆ ನೀಡಿರುವುದು ಖಂಡನೀಯ. ಎಸಿ ಮತ್ತು ಡಿವೈಎಸ್ಪಿ ಯವರು ಅಂಬೇಡ್ಕರ್ ರವರ ವಿರೋಧಿಗಳಾಗಿದ್ದಾರೆ. ಜಿಲ್ಲೆಯನ್ನು ಕಾಪಾಡುವ ಅಧಿಕಾರಿಗಳು ಈ ರೀತಿ ಹೇಳಿಕೆ ನೀಡಬಾರದು. ನಾಮಫಲಕ ಅಳವಡಿಸುವುದು ಬೇಡ ಎಂದು ಹೇಳುತ್ತಿದ್ದಾರೆ.‌

ಇದನ್ನು ಖಂಡಿಸಿ ನಾವು ಅ.24 ರಂದು ಬದನಗುಪ್ಪೆ ಗ್ರಾಮದಿಂದ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಛೇರಿಯವರಿಗೆ ಬೃಹತ್ ಕಾಲ್ನಡಿಗೆ ಜಾಥವನ್ನು ಮಾಡುತ್ತೇವೆ. ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು.‌ ಎಸ್ ಸಿ ಎಸ್ ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಕೀಲ ನಾಗರಾಜು, ಲೋಕೇಶ್ ಬದನಗುಪ್ಪೆ, ಎಂ.ಮಹೇಶ್, ಆರ್. ಮಹೇಶ್, ಶಿವರಾಜು, ದಲಿತ್ ಪುರು, ಮಹದೇವಸ್ವಾಮಿ, ಬಸವರಾಜು, ಮುಕುಂದ ಮೂರ್ತಿ, ಸುರೇಶ್ ಸೇರಿದಂತೆ ವಿಶ್ವ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಬಳಗದ ಪದಾಧಿಕಾರಿಗಳು ಹಾಜರಿದ್ದರು.