ಗುಂಡ್ಲುಪೇಟೆ : ಪಟ್ಟಣದ ಕೆ ಆರ್ಸಿ ರಸ್ತೆಯಲ್ಲಿನ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಪ್ರಾಂಗಣದ ವಸತಿ ಗೃಹಗಳು ಹಲವು ವರ್ಷಗಳಿಂದ ಪಾಳು ಬಿದ್ದಿದ್ದು ಜೂಜುಕೋರರ, ಕುಡುಕರ ಅಡ್ಡೆಯಾಗಿ ಪರಿವರ್ತನೆಗೊಂಡಿದ್ದು ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ ಎಂದು ಗಡಿನಾಡ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಮುನೀರ್ ಪಾಷಾ ಆರೋಪಿಸಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿರುವ ವಸತಿ ಗೃಹಗಳ ಸಮರ್ಪಕ ನಿರ್ವಹಣೆ ಹಾಗೂ ಸೌಲಭ್ಯಗಳ ಕೊರತೆಯಿಂದ ಪಾಳು ಕೊಂಪೆಯಾಗಿ ಬದಲಾಗಿದೆ.

ಕಳೆದ ಐದಾರು ವರ್ಷಗಳಿಂದ ಪಾಳು ಬಿದ್ದಿರುವ ಕೊಠಡಿಗಳ ಕೆಲ ಪರಿಕರಗಳು ಕಳ್ಳರ ಪಾಲಾಗಿವೆ , ಸರ್ಕಾರಿ ಅಧಿಕಾರಿಗಳ ಕಚೇರಿ ಆವರಣದಲ್ಲಿಯೇ ಇಂತಹ ದೃಶ್ಯಗಳು ಕಾಣಸಿಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯತನವನ್ನ ತೋರಿಸುತ್ತಿವೆ ಎಂದು ಮುನೀರ್ ಪಾಷಾ ಆರೋಪಿಸಿದ್ದಾರೆ.

ವಸತಿ ಗೃಹಗಳು ಪಾಳು ಬಿದ್ದಿರುವುದರಿಂದ ಕೆಲಪುಂಡರು ಮದ್ಯವ್ಯಸನ ತಾಣವನ್ನಾಗಿಸಿಕೊಂಡಿದ್ದಾರೆ, ಪ್ರತಿನಿತ್ಯ ಇಂತಹ ಅಕ್ರಮ ಚಟುವಟಿಕೆಗಳು ನಡೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.

