ಗುಂಡ್ಲುಪೇಟೆ : ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳನ್ನ ಬೋನಿಗೆ ನೂಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಐವರ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.
ದೂರಿನಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಉಲ್ಲೇಖಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಗಳಾದ ಡಿ ಆರ್ ಎಫ್ ಓ ಜ್ಞಾನಶೇಖರ್, ಕಾರ್ತಿಕ್ ಯಾದವ್, ವಿನಯ್, ಅರಣ್ಯ ಪಾಲಕ ಬಸವೇಗೌಡ, ಸುಚಿತ್ರ ಎಂಬವರು ಇಲಾಖೆ ವಾಹನ ಕೆ.ಎ.10 ಜಿ 0494 ನೋಂದಣೀಯ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬೊಮ್ಮಲಾಪುರ ಗ್ರಾಮದ ಕೆಪಿಟಿಸಿಎಲ್ ಪಕ್ಕದ ನಿವಾಸಿಗಳಾದ ರಘು, ಪ್ರಸಾದ್, ದೀಪು, ಗಂಗಾಧರ ಸ್ವಾಮಿ,
ರೇವಣ್ಣ ಎಂಬವರು ವಾಹನವನ್ನ ಅಡ್ಡಗಟ್ಟಿ ಇಲಾಖೆ ಸಿಬ್ಬಂದಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ವಾಹನದಿಂದ ಕೆಳಗಿಳಿಸಿದ್ದಾರೆ. ಬಳಿಕ ಬೋನಿನ ಬಳಿಯಿದ್ದ ಗುಂಡ್ಲುಪೇಟೆ ಬಫರ್ ಜೋನ್ ವಲಯದ ಸಂತೋಷ್, ಪ್ರವೀಣ್,ಸುಬ್ರಹ್ಮಣ್ಯ, ಮಣಿಕಂಠ, ರಾಘವೇಂದ್ರ, ಶಿವಣ್ಣ, ರಾಜಪ್ಪ, ಬಸವರಾಜು,ಇವರನ್ನ ಬಂದಿಯಾಗಿರಿಸಿ ಪಕ್ಕದಲ್ಲಿದ್ದ ಕಟ್ಟಿಗೆಗಳನ್ನ ಬೋನಿನ ಸುತ್ತ ಇರಿಸಿ ಜೀವಂತ ಸುಡುವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಿಬ್ಬಂದಿಗಳ ಮನೋಸ್ಟೈರ್ಯ ಕುಗ್ಗಿಸುವ ಕೆಲಸಕ್ಕೆ ಮುಂದಾಗಿರುವ ಐವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ.

