ಗುಂಡ್ಲುಪೇಟೆ : ಕಾಡಾನೆ ಹಾವಳಿಗೆ ಕಡಿವಾಣ ಹಾಕದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಓಂಕಾರ ವಲಯದ ಅರಣ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದ ಓಂಕಾರ ವಲಯದ ಕಚೇರಿಗೆ ಆಗಮಿಸಿದ ಮಂಚಹಳ್ಳಿ, ಸವಕನಹಳ್ಳಿ ಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮದ ರೈತರು ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಗಸ್ತು ತಿರುಗದ ಕಾರಣ ಹಾಗೂ ಕಂದಕಗಳು ಮುಚ್ಚಿರುವುದರಿಂದ ಕಾಡಾನೆಗಳು ಸರಾಗವಾಗಿ ಹೊರಬರುತ್ತಿವೆ, ಸವಕನಹಳ್ಳಿಪಾಳ್ಯದ ಮಹದೇವ್ ಎಂಬುವವರ ಜಮೀನಿಗೆ ನುಗ್ಗಿದ ಕಾಡಾನೆ ಎರಡು ಎಕರೆ ಬೀನ್ಸ್, ಪರಂಗಿ ಸಸಿ ಸೀಬೆ ಹಣ್ಣಿನ ಗಿಡ, ಮಾವಿನ ಮರ, ಬಾಳೆ ಫಸಲನ್ನು ತಿಂದು ನಾಶ ಪಡಿಸಿದೆ.
ಜೊತೆಗೆ ಜಮೀನಿನಲ್ಲಿ ನಿರ್ಮಿಸಿದ್ದ ಶೆಡ್ಡನ್ನ ತುಳಿದು ಹಾಕಿದೆ. ಇದಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೊಚ್ಚಿಗೆದ್ದ ರೈತ ಮಹದೇವ್ ಅರಣ್ಯಾಧಿಕಾರಿಗಳೆ ನೇರ ಹೊಣೆ ಎಂದು ನೇಣು ಬಿಗಿದುಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಸ್ಥಳೀಯರು ಅವರನ್ನು ಸಮಾಧಾನ ಪಡಿಸಿದರು.

ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿ ಸುತ್ತಮುತ್ತಲು ಕಂದಕಗಳು ಮುಚ್ಚಿ ಹೋಗಿರುವ ಕಾರಣ ಆನೆಗಳು ರೈತರ ಜಮೀನುಗಳತ್ತ ದಾಂಗುಡಿ ಇಡುತ್ತಿವೆ. ಹೀಗಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಕಂದಕದಲ್ಲಿ ಬಿದ್ದಿರುವ ಮಣ್ಣು ತೆರವುಗೊಳಿಸುತ್ತಿಲ್ಲ. ಜೊತೆಗೆ ಸಮರ್ಪಕವಾಗಿ ಗಸ್ತು ತಿರುಗದ ಕಾರಣ ಕಾಡಾನೆ ಹಾವಳಿ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಅರಣ್ಯ ಕಚೇರಿಗೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಹನುಮಂತಪ್ಪ ಪಾಟೀಲ್, ನಾನು ಹೊಸದಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಕಂದಕಗಳು ಮುಚ್ಚಿ ಹೋಗಿರುವುದನ್ನು ಪರಿಶೀಲನೆ ನಡೆಸಿ ಕೂಡಲೇ ತೆಗೆಸುವ ಕೆಲಸ ಮಾಡಲಾಗುವುದು. ಜೊತೆಗೆ ಅರಣ್ಯ ಸಿಬ್ಬಂದಿಗಳು ಸಮರ್ಪಕವಾಗಿ ಗಸ್ತು ತಿರುಗುವಂತೆ ಕ್ರಮ ವಹಿಸಿ, ಆನೆಗಳು ರೈತರ ಜಮೀನುಗಳತ್ತ ಬರದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಂಚಹಲ್ಳಿ ಹರೀಶ್, ಗುರು, ಗ್ರಾಪಂ ಸದಸ್ಯ ನಂದೀಶ್, ಸವಕನಹಳ್ಳಿ ಪಾಳ್ಯದ ಮಹದೇವ್, ಡೇರಿ ಉಪಾಧ್ಯಕ್ಷ ಮಾದೇಶ್ ಸೇರಿದಂತೆ ಹಲವು ಮಂದಿ ರೈತರು ಹಾಜರಿದ್ದರು.

