ಚಾಮರಾಜನಗರ: ಹೊಸವರ್ಷದಂದೇ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯ ಕೊಡಸೋಗೆ ಗ್ರಾಮದ ಸಮೀಪ‌ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹೋಬಳಿಯ ಬೊಮ್ಮಲಾಪುರ ಸೆಸ್ಕ್ ಕಚೇರಿಯಲ್ಲಿ‌ ಅಸಿಸ್ಟೆಂಟ್ ಪವರ್ ಮ್ಯಾನ್ ಆಗಿದ್ದ ಪ್ರತಾಪ್ ಹಾಗೂ ಕೊಂಗಳ್ಳಯ್ಯ ಮೃತಪಟ್ಟ ದುರ್ದೈವಿಗಳು. ಮಂಡ್ಯದ ಅಭಿ ಎಂಬಾತ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಬಂದಿದ್ದ ಇವರು ವರ್ಷಾಚರಣೆ ಮುಗಿಸಿಕೊಂಡು ಬುಧವಾರ ಮುಂಜಾನೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ತೆರಕಣಾಂಬಿ ಹೋಬಳಿಯ ಕೊಡಸೋಗೆ ಗ್ರಾಮದ ಸಮೀಪ‌ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನಲ್ಲಿದ್ದ ಪ್ರತಾಪ್ ಮತ್ತು ಕೊಂಗಳ್ಳಯ್ಯ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರೆ, ಗಾಯಗೊಂಡಿದ್ದ ಅಭಿ ಎಂಬಾತನನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಠಾಣಾ ಪೊಲೀಸರು ಮಹಜರು ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ವಾರಸುದಾರರಿಗೆ ನೀಡಲಾಗಿದೆ. ಘಟನೆ ಸಂಬಂಧ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.