ಗುಂಡ್ಲುಪೇಟೆ : ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಮಿತಿ ಮೀರಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಗಿದೆ , ದನಗಳ ಹಾವಳಿಯಿಂದ ಹಲವು ಅಪಘಾತಗಳಾಗಿದ್ದು ಸಾವು ನೋವುಗಳಾಗಿವೆ ಆದರೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣ ಗೌಡ ) ಬಣದ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ವಿ.ನಾಯಕ್ ದೂರಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ದನಗಳು ಹಾಗೂ ನಾಯಿಗಳ ಹಾವಳಿ ಹೆಚ್ಚಾಗಿದೆ ಇದರಿಂದ ವಾಹನ ಸವಾರರ ಪ್ರಾಣಕ್ಕೆ ಕಂಟಕ ಎದುರಾಗಿದೆ, ವಾರ್ಡುಗಳಲ್ಲಿ ಹಾಗೂ ರಸ್ತೆಗಳಲ್ಲಿ ಗುಂಪುಗುಂಪಾಗಿ ಓಡಾಡುತ್ತಿರುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ, ಪಟ್ಟಣದ ಕೆ ಎಸ್ ಆರ್ಟಿಸಿ ಬಸ್ ನಿಲ್ದಾಣದಿಂದ ಊಟಿ ರಸ್ತೆ ಮತ್ತು ಕೇರಳ ರಸ್ತೆಯಲ್ಲಿ ದನಗಳ ಹಾವಳಿ ಹೆಚ್ಚಾಗಿದೆ, ಸಂಚಾರ ರಸ್ತೆಯ ಬದಿಯಲ್ಲೇ ಮಲಗುವ ಜಾನುವಾರುಗಳಿಂದ ಅಪಘಾತ ಪ್ರಕರಣಗಳು ಹೆಚ್ಚಾಗತೊಡಗಿವೆ ಎಂದು ಬೇಸರ ಹೊರಹಾಕಿದ್ದಾರೆ.
ಬೀಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಪುರಸಭೆ ಜಾನುವಾರುಗಳ ಮಾಲೀಕರಿಗೆ ನೀಡುವ ಸೂಚನೆಯ ಬಿಸಿ ಪರಿಣಾಮಕಾರಿಯಾಗಿ ತಟ್ಟಿಲ್ಲ ಆದುದರಿಂದಲೇ ನಾವು ನಮ್ಮ ಕೆಲಸ ಮಾಡುತ್ತೇವೆ ದನಗಳನ್ನ ರಸ್ತೆಗೆ ಬಿಡುತ್ತೇವೆ ಎಂಬ ನಿರ್ಲಕ್ಷ್ಯದ ಧೋರಣೆಯನ್ನು ಮಾಲೀಕರು ಹೊಂದಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿನ ಬಿಡಾಡಿ ದನಗಳನ್ನು ಪುರಸಭೆ ತಮ್ಮ ಸುಪರ್ದಿಗೆ ತೆಗೆದು ಕೊಳ್ಳಬೇಕು, ಇಲ್ಲವಾದರೆ ಅವುಗಳನ್ನು ಹಿಡಿದು ಗೋಶಾಲೆಗೆ ಸ್ಥಳಾಂತರ ಮಾಡಬೇಕು , ಒಮ್ಮೆ ಗೋಶಾಲೆಗೆ ಸಾಗಿಸಿದ ದನಗಳನ್ನು ಹಿಂತಿರುಗಿಸುವುದಿಲ್ಲ ಎಂಬ ಆದೇಶವನ್ನ ಹೊರಡಿಸಬೇಕು.
ಆಗ ಮಾತ್ರ ದನಗಳ ಹಾವಳಿಗೆ ಕಡಿವಾಣ ಹಾಕಬಹುದು ಇಲ್ಲವಾದಲ್ಲಿ ಅಪಘಾತಗಳ ಸಂಖ್ಯೆಯನ್ನ ಎಣಿಸುತ್ತ ಕೂರಬೇಕಾಗುತ್ತದೆ , ಕೇವಲ ಕಾಟಾಚಾರಕ್ಕೆ ದನಗಳ ಹಾವಳಿ ನಿಯಂತ್ರಣ ಕಾರ್ಯಾಚರಣೆ ನಡೆಸಿ ನೆಪ ಮಾತ್ರಕ್ಕೆ ಮಾಲೀಕರಿಗೆ ತಿಳುವಳಿಕೆ ಹೇಳಿ ಕಳುಹಿಸುವ ಪ್ರವೃತ್ತಿಯನ್ನ ಅಧಿಕಾರಿಗಳು ಬಿಡಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

