ಗುಂಡ್ಲುಪೇಟೆ : ಚಿರತೆ ದಾಳಿ ನಡೆಸಿ ಕರು ಬಲಿ ಪಡೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಅಡವಿ ಮಠದ ಗೋ ಶಾಲೆಯಲ್ಲಿ ನಡೆದಿದೆ.

ತಾಲೂಕಿನ ಪಡಗೂರು ಗ್ರಾಮದ ಅಡವಿ ಮಠದ ಗೋ ಶಾಲೆಯ ಕೊಟ್ಟಿಗೆಯಲ್ಲಿ ಕರುವನ್ನು ಕಟ್ಟಿಹಾಕಿದ್ದ ವೇಳೆ ಚಿರತೆ ದಾಳಿ ನಡೆಸಿ ಕೊಂದು ಹಾಕಿ ಕಾಲ್ಕಿತ್ತಿದ್ದೆ. ಸ್ಥಳಕ್ಕೆ ಬಂಡೀಪುರ ಹುಲಿ ರಕ್ಷಿತಾರಣ್ಯದ ಬಫರ್ ವಲಯ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.

ಚಿರತೆ, ಹುಲಿ ಕಾಟಕ್ಕೆ ಜಮೀನಿಗೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ರೈತರು ಕೂಡ ಹೆದರುವ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಚಿರತೆ ಸೆರೆ ಹಿಡಿಯಬೇಕೆಂದು ರೈತ ಮುಖಂಡ ಪಡಗೂರು ಶಿವಕುಮಾರ್ ಒತ್ತಾಯಿಸಿದ್ದಾರೆ. ಇನ್ನು, ಕರು ಮೃತಪಟ್ಟ ವಿಚಾರ ತಿಳಿಯದೇ ಹಸು ಕರುವನ್ನು ನೇವರಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.