ಗುಂಡ್ಲುಪೇಟೆ : ಮಳೆಬಂತೆಂದರೆ ಶಾಲಾ ಆವರಣದಲ್ಲಿ ಕೆರೆಯಂತೆ ಸಂಗ್ರಹವಾಗುವ ನೀರು ಹೋಗಲು ದಾರಿಯಿಲ್ಲದ ಹಿನ್ನೆಲೆ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ ಸರ್ಕಾರಿ ಶಾಲೆ ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ, ಮಳೆ ಬಂದರೆ ಶಾಲೆಯ ಮುಂಭಾಗದ ಆವರಣದಲ್ಲಿ ನೀರು ವ್ಯಾಪಿಸಿಕೊಂಡು ಕೆರೆಯಂತಾಗುತ್ತದೆ, ಇದರಿಂದ ಶಾಲೆಗೆ ಬರುವ ಮಕ್ಕಳು ನೀರಿನಲ್ಲಿ ಕಾಲಿಟ್ಟು ಬರಬೇಕಾಗುತ್ತಿದೆ.

ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಅದ್ವಾನಗೊಂಡಿರುವ ಶಾಲಾ ಆವರಣ ಸೊಳ್ಳೆಗಳ ಆವಾಸ ತಾಣವಾಗಿ ಬದಲಾಗುತ್ತಿದೆ ಎಂದು ಗ್ರಾಮದ ಮುಖಂಡ ಮಹೇಶ್ ಬೇಸರ ಹೊರಹಾಕಿದ್ದಾರೆ.

ಶಾಲಾ ಆವರಣದಲ್ಲೇ ಗ್ರಾಮಪಂಚಾಯತಿ ಕಛೇರಿಯಿದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿ ಮಕ್ಕಳು ಸಮಸ್ಯೆ ಎದುರಿಸಬೇಕಿದೆ, ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.