ಗುಂಡ್ಲುಪೇಟೆ : ಹಲವು ದಿನಗಳಿಂದ ಓಡಾಡಿ, ಸಾಕುನಾಯಿ ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡಿ ರೈತರಲ್ಲಿ ಭಯ ಮೂಡಿಸಿದ್ದ ಚಾಲಾಕಿ ಚಿರತೆ ಸೆರೆಯಾದ ಘಟನೆ ಗುಂಡ್ಲುಪೇಟೆ ಪಟ್ಟಣ ಹೊರವಲಯದ ಮನಗಳ್ಳಿಯಲ್ಲಿ ನಡೆದಿದೆ.

ಮನಗಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸೆರೆ ಸಿಕ್ಕ ಚಿರತೆಯು ಹೆಣ್ಣಾಗಿದ್ದು 2-3 ವರ್ಷ ವಯಸ್ಸಿನದ್ದು ಎಂದು ಗುಂಡ್ಲುಪೇಟೆ ಬಫರ್ ವಲಯದ ಡಿಆರ್ ಎಫ್ ಒ ಶಿವಕುಮಾರ್ ತಿಳಿಸಿದ್ದಾರೆ. ಎರಡು ಕರು ಹಾಗೂ ಸಾಕುನಾಯಿಗಳ ಮೇಲೆ ಚಿರತೆ ದಾಳಿ ಮಾಡಿತ್ತು.‌ ‌ಚಿರತೆ ಸೆರೆಗೆ ಬೋನ್ ಇಡುವಂತೆ ಸ್ಥಳೀಯ ರೈತ ಮುಖಂಡರು ಮನವಿ ಮಾಡಿದ್ದ ಹಿನ್ನೆಲೆ ಇಡಲಾಗಿದ್ದ ಬೋನಿಗೆ ಆಹಾರದಾಸೆಗೆ ಬಂದು ಚಿರತೆ ಸೆರೆಯಾಗಿದೆ.

ಕೊನೆಗೂ ಚಾಲಾಕಿ ಚಿರತೆ ಸೆರೆಯಾಗಿರುವುದರಿಂದ ಸುತ್ತಮುತ್ತಲಿನ ರೈತರು ನಿಟ್ಟುಸಿರು ಬಿಡುವಂತಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯಕ್ಕೆ ಮನಗಳ್ಳಿ ಗ್ರಾಮ ಒಳಪಡಲಿದ್ದು ಸೆರೆ ಸಿಕ್ಕ ಚಿರತೆಯನ್ನು ದಟ್ಟಾರಣಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.